ಬೇಬಿಬೆಟ್ಟ ಪ್ರದೇಶದ ಕಲ್ಲು ಗಣಿಗಾರಿಕೆ ಪ್ರದೇಶಗಳಿಗೆ ಅಧಿಕಾರಿಗಳ ದಾಳಿ: ಮಾಲಕರಿಗೆ ನೊಟೀಸ್ ಜಾರಿ

Update: 2021-01-23 18:15 GMT

ಪಾಂಡವಪುರ, ಜ.23: ತಾಲೂಕಿನ ಬೇಬಿ ಬೆಟ್ಟದ ಅಮೃತ್ ಕಾವಲ್ ಪ್ರದೇಶ, ಹೊನಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮದ ಸುತ್ತಮುತ್ತಲಿನ ಕಲ್ಲುಗಣಿಗಾರಿಕೆ ಪ್ರದೇಶಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಮಾಲಕರಿಗೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ನೊಟೀಸ್ ಜಾರಿ ಮಾಡಿದರು.

ಬೇಬಿ ಬೆಟ್ಟ ಸುತ್ತಲಿನ ಕಲ್ಲುಗಣಿಗಾರಿಕೆಯಿಂದ ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಿರುವ ಬಗ್ಗೆ ಕೇಂದ್ರ ನೈಸರ್ಗಿಕ ವಿಕೋಪ ತಂಡದ ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಗಣಿಗಾರಿಕೆ ನಿಷೇಧಿಸಿ ಆದೇಶಿದ್ದರು. ಈ ಹಿನ್ನಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸುಮಾರು 70ಕ್ಕೂ ಕಲ್ಲು ಕ್ವಾರಿಗಳ ಸುತ್ತ ಕಂದಕಗಳನ್ನು ನಿರ್ಮಾಣ ಮಾಡಿ ಗಣಿಗಾರಿಕೆಗೆ ಅವಕಾಶವಾಗದಂತೆ ಕ್ರಮಗೊಳ್ಳಲಾಗಿತ್ತು. ಆದರೂ, ಹಲವು ಗಣಿ ಮಾಲಕರು ಕಂದಕಗಳಿಗೆ ಮಣ್ಣು ತುಂಬಿ ಕದ್ದು ಮುಚ್ಚಿ ಗಣಿಗಾರಿಕೆ ನಡೆಸುತ್ತಿದ್ದರು.

ಗಣಿ ಮಾಲಕರು ಈ ಹಿಂದೆ ನಿರ್ಮಿಸಿದ್ದ ಸಣ್ಣ ಮಟ್ಟದ ಕಂದಕಗಳಿಗೆ ಮಣ್ಣು ತುಂಬಿ ಗಣಿಗಾರಿಕೆ ಮುಂದುವರೆಸಿದ್ದ ಪರಿಣಾಮ ಎಚ್ಚೆತ್ತ ಅಧಿಕಾರಿಗಳು ಶನಿವಾರ ಹಿಟಾಚಿಗಳ ಮೂಲಕ ಬೃಹತ್ ಕಂದಕಗಳನ್ನು ನಿರ್ಮಿಸಿ ಲಾರಿ, ಟಿಪ್ಪರ್, ಟ್ರ್ಯಾಕ್ಟರ್ ಯಾವುದೇ ವಾಹನ ಸಂಚರಿಸಿದಂತೆ ಆಳೆತ್ತರದ ಬೃಹತ್ ಕಂದಕಗಳನ್ನು ತೋಡುತ್ತಿದ್ದು, ರಸ್ತೆಗಳಿಗೆ ಅಡ್ಡಲಾಗಿ ಕಂದಕಗಳ ಮಣ್ಣನ್ನು ರಾಶಿ ಹಾಕಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.

ಕಲ್ಲು ಕ್ರಷಿಂಗ್ ಮಾಡಲು ಅಧಿಕೃತ ಪರವಾನಗಿ ‘ಸಿ’ ಫಾರಂ ಹೊಂದಿರುವ ಹಲವು ಗಣಿ ಮಾಲಕರ ಬಳಿ ಕ್ವಾರಿಗಳಲ್ಲಿ ಕಲ್ಲು ಸಿಡಿಸಲು ಪರವಾನಗಿ ಇಲ್ಲದ ಕಾರಣ ಕಳೆದ ಮೂರು ತಿಂಗಳಿನಿಂದ ಪರವಾನಗಿ ಕ್ರಷರ್ ನಡೆಸಲು ಅಗತ್ಯವಿರುವ ಕಚ್ಛಾ ಕಲ್ಲುಗಳು ಎಲ್ಲಿಂದ ಸರಬರಾಜಾಗುತ್ತಿದೆ ಎಂಬುದರ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿ ಮಾಲಕರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಒಂದು ವೇಳೆ ಕಚ್ಚಾ ಕಲ್ಲು ಸರಬರಾಜಾಗುತ್ತಿರುವ ಬಗ್ಗೆ ದಾಖಲೆ ನೀಡದಿದ್ದರೆ ಕ್ರಷರ್ ನಡೆಸಲು ನೀಡಿರುವ ಅನುಮತಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವುದಾಗಿ ನೊಟೀಸ್‍ನಲ್ಲಿ ಎಚ್ಚರಿಸಿದ್ದಾರೆ.

ದಾಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಟಿ.ವಿ.ಪುಷ್ಪಾ ನಟಶೇಖರ್, ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಪೊಲೀಸ್ ಸಬ್‍ಇನ್ಸ್ ಸ್ಪೆಕ್ಟರ್ ಪೂಜಾ ಕುಂಟೋಜಿ, ಕಂದಾಯ ನೀರೀಕ್ಷಕ ಮಹದೇಶ್, ಗ್ರಾಮಲೆಕ್ಕಾಧಿಕಾರಿಗಳಾದ ರೂಪ, ಪ್ರಭಾಕರ್, ಪೊಲೀಸ್ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News