ಹುಣಸೋಡು ದುರಂತ: ತನಿಖೆಗೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಧರಣಿ

Update: 2021-01-23 18:26 GMT

ಶಿವಮೊಗ್ಗ, ಜ.23: ನಗರದ ಹೊರವಲಯದ ಹುಣಸೋಡು ಕಲ್ಲು ಕ್ವಾರೆಯಲ್ಲಿ ನಡೆದ ಭೀಕರ ಸ್ಫೋಟದ ತನಿಖೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಬ್ಬಲಗೆರೆ ಗ್ರಾಮ ಪಂಚಾಯತ್ ಕಚೇರಿ ಎದುರು ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.

ಘಟನೆಯಲ್ಲಿ ಅಮಾಯಕರು ಬಲಿಯಾಗಿದ್ದು, ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದೆ ಹಾಗೂ ಕಲ್ಲು ಕ್ವಾರೆ ಮಾಲಕರನ್ನು ರಕ್ಷಿಸಲು ಹೊರಟಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿದ ಬಿಜೆಪಿ ಸರ್ಕಾರಕ್ಕೆ ದಿಕ್ಕಾರ ಎನ್ನುವ ಘೋಷಣೆಯ ಮೂಲಕ ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಿಲ್ಲಾ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ತಕ್ಷಣ ರಾಜೀನಾಮೆ ನೀಡಬೇಕು. ಅಕ್ರಮ ಕಲ್ಲುಗಣಿಗಾರಿಕೆ ಮಾಡುವ ಬಿಜೆಪಿ ಪ್ರಭಾವಿ ಮುಖಂಡರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಗಣಿಗಾರಿಕೆಯನ್ನೇ ಬಂಡವಾಳ ಮಾಡಿಕೊಂಡ ಕೆಲವು ಬಿಜೆಪಿ ನಾಯಕರು ಹಲವು ವರ್ಷಗಳಿಂದ ಸಾರ್ವಜನಿಕರ ವಿರೋಧ ಇದ್ದರೂ ಸಹ ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ ನೀಡುತ್ತಾ ಅಧಿಕಾರಿಗಳ ಮೇಲೆ ದರ್ಪ ತೋರಿಸುತ್ತಾ, ಅವಕಾಶ ನೀಡಿದ್ದೇ ಮೊನ್ನೆಯ ದುರ್ಘಟನೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಫೊಟದಿಂದ ಹತ್ತಾರು ಕಿಲೋಮೀಟರ್ ದೂರದಲ್ಲಿ ಹಲವು ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಹಾನಿಗೊಳಗಾದವರಿಗೆ ತಕ್ಷಣ ಪರಿಹಾರ ನೀಡಬೇಕು. ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಮತ್ತು ಹೆಚ್ಚಿನ ಪರಿಹಾರ ನೀಡಬೇಕು. ಎಲ್ಲಾ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಡಾ.ಶ್ರೀನಿವಾಸ್ ಕರಿಯಣ್ಣ, ಎಸ್. ರವಿಕುಮಾರ್, ಎಲ್. ರಾಮೇಗೌಡ, ಕೆ. ದೇವೇಂದ್ರಪ್ಪ, ಯಮುನಾ ರಂಗೇಗೌಡ, ಸೈಯದ್ ವಾಹಿದ್ ಅಡ್ಡು, ವಿಜಯಲಕ್ಷ್ಮಿ ಪಾಟೀಲ್, ಶರತ್, ಎಸ್.ಪಿ.ಶೇಷಾದ್ರಿ, ಕೆ. ಚೇತನ್, ಸಿ.ಜಿ. ಮಧುಸೂಧನ್, ಸೌಗಂಧಿಕಾ ಮತ್ತಿತರರು ಇದ್ದರು

ಈಶ್ವರಪ್ಪ ರಾಜೀನಾಮೆಗೆ ಒತ್ತಾಯ

ಹುಣಸೋಡು ಸ್ಫೋಟದಲ್ಲಿ ಇನ್ನೂ ಹೆಚ್ಚಿನ ಜನ ಮೃತಪಟ್ಟಿರುವ ಶಂಕೆ ಇದೆ. ದೇಹಗಳು ಛಿದ್ರವಾಗಿರುವುದರಿಂದ ಮೃತರ ಗುರುತು ಪತ್ತೆಯಾಗಿಲ್ಲ. ಗುರುತು ಪತ್ತೆ ಮಾಡಿ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಅವರು, ಭಾರೀ ಸ್ಫೋಟದಿಂದಾಗಿ ಮೂರ್ನಾಲ್ಕು ಜಿಲ್ಲೆಯ ಜನ, ಜಾನುವಾರು, ಪಕ್ಷಿಗಳು ನಲುಗಿ ಹೋಗಿವೆ. ಪುಲ್ವಾಮಾ ಮಾದರಿ ದಾಳಿ ನಡೆದಂತಿದೆ. ಯಡಿಯೂರಪ್ಪ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಜಿಲೆಟಿನ್ ಸ್ಫೋಟಕ್ಕೆ ನಿಮ್ಮ ಪಕ್ಷದವರೇ ಕಾರಣ, ನಿಮ್ಮ ಸರ್ಕಾರದ ಅಧಿಕಾರಿಗಳೇ ಕಾರಣ. ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಅಮಾಯಕರ ಸಾವಿಗೆ ನ್ಯಾಯ ದೊರಕಿಸಿ ಈ ಘಟನೆಯ ಬಗ್ಗೆ ದಿಟ್ಟ ಕ್ರಮಕೈಗೊಳ್ಳಬೇಕಿದೆ. ಪ್ರಕರಣದಲ್ಲಿ ಬಿಜೆಪಿಗರ ಬಂಡವಾಳ ಬಯಲಾಗಿದೆ. ಕಣ್ಣು, ಕಿವಿ, ಮೂಗು ಇಲ್ಲದ ಈ ಸರ್ಕಾರ ಬಡವರ ಬಾಳಿನ ಜೊತೆಗೆ ಚೆಲ್ಲಾಟವಾಡುತ್ತಿದ್ದು, ಇಡೀ ದೇಶದ ಗಮನ ಸೆಳೆದ ಈ ಪ್ರಕರಣವನ್ನು ಸ್ವತಃ ಪ್ರಧಾನಿಯವರೇ ಖಂಡಿಸಿದ್ದಾರೆ. ಬಿಜೆಪಿ ರಾಜ್ಯ ನಾಯಕರಿಗೆ ಮುಂದಿನ ದಿನಗಳಲ್ಲಿ ಬಿಸಿ ತುಪ್ಪವಾಗಿ ಪರಿಣಮಿಸಲಿದೆ. ಕೂಡಲೇ ಘಟನೆಯ ನೈತಿಕ ಹೊಣೆ ಹೊತ್ತು ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರಸ್ತೆ ತಡೆ ನಡೆಸಿದ ಕಾರ್ಯಕರ್ತರ ಬಂಧನ
ರಸ್ತೆ ತಡೆ ನಡೆಸಿದ್ದ ಕಾಂಗ್ರೆಸ್ ಪದಾಧಿಕಾರಿಗಳನ್ನು ಮತ್ತು ಕಾರ್ಯಕರ್ತರನ್ನು ಪೋಲಿಸರು ಬಂಧಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಸುಮಾರು 20 ನಿಮಿಷ ಕಾಲ ರಸ್ತೆ ತಡೆ ನಡೆಸಿದ್ದರಿಂದ ನೂರಾರು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಕೆಲ ಕಾಲ ಸಂಚಾರಕ್ಕೆ ತೊಂದರೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News