ಬಿಜೆಪಿ ಆಡಳಿತದಿಂದಾಗಿ ರಾಜ್ಯ ಕೇಸರಿ ಮಯವಾಗುತ್ತಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

Update: 2021-01-24 12:49 GMT

ಬೆಂಗಳೂರು, ಜ. 24: ಬಿಜೆಪಿ ಆಡಳಿತದಿಂದಾಗಿ ರಾಜ್ಯ ಇಂದು ಕೇಸರಿ ಮಯವಾಗುತ್ತಿದೆ. ಕಾಂಗ್ರೆಸ್ ಪಕ್ಷದವರು ದೂರು ನೀಡಿದರೂ ಪೊಲೀಸರು ದಾಖಲಿಸಿಕೊಳ್ಳುತ್ತಿಲ್ಲ. ಅವರ ದೂರುಗಳನ್ನು ದಾಖಲಿಸಬೇಡಿ ಎಂದು ಬಿಜೆಪಿಯವರೇ ಒತ್ತಡ ಹೇರುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಹೇಳಿದ್ದಾರೆ. ರಾಜ್ಯವನ್ನು ಬಿಜೆಪಿ ಕೇಸರಿಮಯ ಮಾಡುತ್ತಿದೆ. ಆದರೆ, ನಾವು ಇಂತಹ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜೀವಂತವಾಗಿದೆ ಎಂದು ತಿಳಿಸಿದರು.

ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ: ಶಾಸಕಿ ಸೌಮ್ಯಾ ರೆಡ್ಡಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ. ಆದರೆ, ಇಬ್ಬರು ಶಾಸಕಿಯರನ್ನು ರಸ್ತೆಯಲ್ಲಿ ಕೆಡವಿದ ಸರಕಾರ ಮೊದಲು ಸೂಕ್ತ ಉತ್ತರ ನೀಡಲಿ ಎಂದ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಿ. ಆದರೆ, ಶಾಸಕಿಯರಾದ ಅಂಜಲಿ ನಿಂಬಾಳ್ಕರ್ ಹಾಗೂ ಸೌಮ್ಯಾರೆಡ್ಡಿ ಪ್ರತಿಭಟನೆಯ ವೇಳೆ ಕೆಳಗೆ ಬಿದ್ದಿದ್ದರು. ಅವರು ಕೆಳಗೆ ಬಿದ್ದಿದ್ದು ಹೇಗೆ? ಅದರ ಬಗ್ಗೆ ಸರಕಾರ ಮೊದಲು ಉತ್ತರ ಹೇಳಲಿ. ಜನಪ್ರತಿನಿಧಿಗಳು ಏಕಾಏಕಿ ಕೆಳಗೆ ಬೀಳಲು ಏನು ಕಾರಣ ? ಗೃಹ ಸಚಿವರು ಮೊದಲು ಇದನ್ನ ತಿಳಿಸಲಿ. ಕೆಳಗೆ ಬಿದ್ದಿದ್ದರಿಂದ ಶಾಸಕಿ ಅಂಜಲಿ ನಿಂಬಾಳ್ಕರ್ ಅಸ್ವಸ್ಥರಾದರು. ಅವರಿಬ್ಬರೂ ಶಾಸಕರು, ಅವರನ್ನ ಕೆಳಗೆ ಬೀಳಿಸಿದ್ದು ಯಾರು? ಎಂದು ಪ್ರಶ್ನಿಸಿದರು.

ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ನಾನು ಸಚಿವನಾಗಿದ್ದೇನೆ. ಬೆಂಗಳೂರಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದೇನೆ. ಬಿಬಿಎಂಪಿ ಚುನಾವಣೆ ಹಾಗೂ 2023 ರಾಜ್ಯ ಚುನಾವಣೆ ನನ್ನ ಗುರಿ ಎಂದು ಹೇಳಿದರು.

ಬಿಟ್ಟು ಹೋದವರನ್ನು ವಾಪಸ್ ಕರೆತರುತ್ತೇವೆ: ನಾನಾ ಕಾರಣಗಳಿಂದ ಕೆಲವರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಹೋಗಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಬಿಟ್ಟು ಹೋದವರನ್ನು ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ’

-ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News