ಎಫ್‌ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮೂಲ ಸೂತ್ರಧಾರಿಯ ಹುಡುಕಾಟ

Update: 2021-01-24 12:32 GMT

ಬೆಂಗಳೂರು, ಜ.24: ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿ 14 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ಮೂಲ ಸೂತ್ರಧಾರಿಯ ಹುಡುಕಾಟ ನಡೆಸುತ್ತಿದ್ದಾರೆ.

ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಾರ್ಗದರ್ಶನದಲ್ಲಿ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿದ್ದು, ಸೂತ್ರಧಾರಿಯ ಪತ್ತೆಗೆ ಮುಂದಾಗಿದ್ದಾರೆ. ಜತೆಗೆ, ಆರೋಪಿಗಳ ಮೊಬೈಲ್‌ನಲ್ಲಿರುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ವಾಟ್ಸ್ ಆ್ಯಪ್ ಮೂಲಕವೂ ಎಷ್ಟು ಮಂದಿಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಯನ್ನು ಕಳುಹಿಸಲಾಗಿದೆ ಎನ್ನುವ ಅಂಶವನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಧಿತರ ಸಂಖ್ಯೆ 14ಕ್ಕೆ: ಈ ಕುರಿತು ಮಾಹಿತಿ ನೀಡಿದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಉಳ್ಳಾಲದ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು ಚಂದ್ರು ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಈತ ನೀಡಿದ ಮಾಹಿತಿ ಬೆನ್ನಲ್ಲೇ ಇದೀಗ ಒಟ್ಟು 14 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಬಂಧಿತರಿಂದ 35 ಲಕ್ಷ ನಗದು, ಒಂದು ಕಾರು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಆರೋಪಿಗಳು ಆನ್‌ಲೈನ್ ಮೂಲಕ ಜಿಲ್ಲಾವಾರು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ಕುರಿತಾಗಿಯೂ ತನಿಖೆ ನಡೆಸಲಾಗುತ್ತಿದೆ. ಇನ್ನು, ಬಂಧಿತರಿಗೆ ಹೇಗೆ ಪ್ರಶ್ನೆ ಪತ್ರಿಕೆ ದೊರೆತಿದೆ ಎನ್ನುವ ಆಯಾಮದ ಕುರಿತು ತನಿಖೆ ತೀವ್ರಗೊಳಿಸಲಾಗಿದ್ದು, ಇದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೂವಾರಿ ಅಧಿಕಾರಿ?: ಕೆಪಿಎಸ್ಸಿ ಹಿರಿಯ ಅಧಿಕಾರಿ ಒಬ್ಬರು ಈ ಪ್ರಕರಣದ ರೂವಾರಿ ಎಂದು ಹೇಳಲಾಗುತ್ತಿದ್ದು, ಈತನ ಕೈಯಿಂದಲೇ ಪ್ರಶ್ನೆಪತ್ರಿಕೆಗಳನ್ನು ಸೋರಿಕೆಯಾಗಿದೆ. ಇನ್ನು ಈತ ಕಚೇರಿಯಿಂದ ಪ್ರಶ್ನೆಪತ್ರಿಕೆಗಳನ್ನು ಹೊರತಂದು ಆರೋಪಿ ವಾಣಿಜ್ಯ ತೆರಿಗೆ ಇಲಾಖೆ ಇನ್‌ಸ್ಪೆಕ್ಟರ್ ಜಿ.ಎಸ್.ಚಂದ್ರುಗೆ ನೀಡಿದ್ದ. ಬಳಿಕ ಚಂದ್ರು ಅವುಗಳನ್ನು ಉಳ್ಳಾಲದ ಆರ್ ಆರ್ ರೆಸಿಡೆನ್ಸಿಯ ಫ್ಲಾಟ್‌ನಲ್ಲಿಟ್ಟಿದ್ದ. ನಂತರ ತಾವು ಹಾಕಿಕೊಂಡ ಯೋಜನೆಯಂತೆ ಇನ್ನುಳಿದ ರಾಜ್ಯದ ವಿವಿಧೆಡೆಯ ಮಧ್ಯವರ್ತಿಗಳಿಗೆ ಸರಬರಾಜು ಮಾಡಲು ಸಂಚು ರೂಪಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೂ ಬೇರೆ ಬೇರೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಈತನ ಪಾಲಿರುವ ಮಾಹಿತಿ ಲಭ್ಯವಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News