4 ರಸಗೊಬ್ಬರ ಕಾರ್ಖಾನೆಗಳ ಪುನಶ್ಚೇತನಕ್ಕೆ 50 ಸಾವಿರ ಕೋಟಿ ರೂ.: ಡಿ.ವಿ.ಸದಾನಂದ ಗೌಡ

Update: 2021-01-24 12:35 GMT

ಬೆಂಗಳೂರು, ಜ.24: ವಿವಿಧ ಕಾರಣಗಳಿಗಾಗಿ ಸ್ಥಗಿತಗೊಂಡಿದ್ದ ನಾಲ್ಕು ರಸಗೊಬ್ಬರ ಕಾರ್ಖಾನೆಗಳನ್ನು ಪುನಶ್ಚೇತನ ಗೊಳಿಸಲಾಗುತ್ತಿದ್ದು, ಇದಕ್ಕಾಗಿ 50 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ವೆಚ್ಚಮಾಡಲಾಗುತ್ತಿದೆ ಎಂದು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಥಗಿತಗೊಂಡಿದ್ದ ನಾಲ್ಕು ಕಾರ್ಖಾನೆಗಳ ಪೈಕಿ ರಾಮಗುಂಡಮ್ ಸ್ಥಾವರದ ಕೆಲಸ ಬಹುತೇಕ ಮುಗಿದಿದ್ದು ಯೂರಿಯಾ ಉತ್ಪಾದನೆಗೆ ಸಜ್ಜಾಗಿದೆ. ಔಷಧ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿ ಮಾಡಲು ಔಷಧ ಇಲಾಖೆ ವತಿಯಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಉಪಕ್ರಮಗಳಲ್ಲಿ ಮೂರು ಬಲ್ಕ್ ಡ್ರಗ್ ಪಾರ್ಕ್ ಗಳು ಹಾಗೂ ನಾಲ್ಕು ಮೆಡಿಕಲ್ ಡಿವೈಸ್ ಪಾರ್ಕ್ ಗಳು ಸೇರಿವೆ ಎಂದು ತಿಳಿಸಿದ್ದಾರೆ.

ಸ್ವಾವಲಂಬಿ ಭಾರತ ಯೋಜನೆಯಡಿ ದೇಶದ ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶದಲ್ಲಿ ಎರಡು ಪ್ಲಾಸ್ಟಿಕ್ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಂಗಳೂರು ಹಾಗೂ ಉತ್ತರ ಪ್ರದೇಶದ ಗೋರಕ್ಪುರದಲ್ಲಿ ತಲಾ ಒಂದೊಂದು ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸುವ ಬಗ್ಗೆ ಇತ್ತೀಚೆಗೆ ನಡೆದ ರಾಸಾಯನಿಕ ಇಲಾಖೆಯ ಯೋಜನೆ ಚಾಲನಾ ಸಮಿತಿ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಾಸ್ಟಿಕ್ ಕಾರ್ಖಾನೆ ಸ್ಥಾಪಿಸುವುದರ ಬಗ್ಗೆ ರಾಜ್ಯ ಸರಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದ್ದೇವೆ. ಶೀಘ್ರವೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಿ ಅಂತಿಮ ಒಪ್ಪಿಗೆ ಸಲ್ಲಿಸುವಂತೆ ತಿಳಿಸಲಾಗಿದೆ. 40 ಕೋಟಿ ರೂ.ವೆಚ್ಚದ ಯೋಜನೆ ಇದಾಗಿದ್ದು, ಆರು ತಿಂಗಳ ಒಳಗೆ ಅಂತಿಮ ಒಪ್ಪಿಗೆ ನೀಡಿ ಯೋಜನೆಯ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಪಾರ್ಕ್ ಬಗ್ಗೆ  ಜನರಿಗೆ ಕುತೂಹಲ ಇರಬಹುದು. ಇದೊಂದು ಪ್ಲಾಸ್ಟಿಕ್ ಸಂಬಂಧಿತ ಕೈಗಾರಿಗೆಳಿಗೆ ಸೀಮಿತವಾದ ಕೈಗಾರಿಕಾಭಿವೃದ್ಧಿ ಕೇಂದ್ರ. ಪ್ಲಾಸ್ಟಿಕ್ ಸಂಬಂಧಿತ ಕೈಗಾರಿಕೆಗಳ ಅಭಿವೃದ್ಧಿಗೆ ಬೇಕಾದ ಎಲ್ಲ ಆಧುನಿಕ ತಂತ್ರಜ್ಞಾನ ಸೌಕರ್ಯಗಳೂ ಇಲ್ಲಿರುತ್ತವೆ. ಇವು ಸಾಮಾನ್ಯ ಸೌಲಭ್ಯಗಳಾಗಿದ್ದು, ಇಲ್ಲಿ ಸ್ಥಾಪಿತವಾಗುವ ಎಲ್ಲ ಕೈಗಾರಿಕಾ ಘಟಕಗಳೂ ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಇದರಿಂದ ನಮ್ಮ ಸ್ವದೇಶಿ ಪ್ಲಾಸ್ಟಿಕ್ ಕೈಗಾರಿಕೆಗಳು ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬಹುದೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News