ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಎಷ್ಟೇ ಪ್ರಭಾವಿಗಳಿದ್ದರೂ ಬಂಧನ ಖಚಿತ ಎಂದ ಬಸವರಾಜ ಬೊಮ್ಮಾಯಿ

Update: 2021-01-24 12:51 GMT

ಬೆಂಗಳೂರು, ಜ.24: ಎಫ್‌ಡಿಎ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಎಷ್ಟೇ ಪ್ರಭಾವಿಗಳಿದ್ದರೂ ಪ್ರಕರಣಕ್ಕೆ ಕಾರಣಕರ್ತರಾದವರನ್ನು ಬಂಧಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಬಂಧಿತರ ವಿಚಾರಣೆ ನಡೆಸಿ ತನಿಖೆ ಮುಂದುವರಿಸುತ್ತೇವೆ. ಈ ಪ್ರಕರಣದ ಹಿಂದೆ ಯಾರೆಲ್ಲಾ ಇದ್ದಾರೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅತೀ ಶೀಘ್ರದಲ್ಲೇ ಪ್ರಕರಣದ ಹಿಂದೆ ಇರುವ ಎಲ್ಲರನ್ನೂ ಬಂಧಿಸುತ್ತೇವೆ ಎಂದರು.

ಸುರಕ್ಷತೆ ಇದ್ದರೂ ಹೇಗೆ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿವೆ ಎನ್ನುವುದು ಮಹತ್ವದ ಪ್ರಶ್ನೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ತಗೊಂಡಿದ್ದೇವೆ. ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮಾಹಿತಿ ಬಂದ ತಕ್ಷಣ ಆರ್‌ಆರ್ ‌ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ಅಕ್ರಮವನ್ನು ಭೇದಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಶ್ನೆ ಪತ್ರಿಕೆಗಳನ್ನು ಅತ್ಯಂತ ಸುರಕ್ಷತೆಯಿಂದ ಇಡಲಾಗುತ್ತದೆ ಎಂದು ತಿಳಿಸಿದರು.

ನಾಳೆ ಮಾರ್ಗಸೂಚಿ ಬಿಡುಗಡೆ: ಸ್ಫೋಟಕಗಳ ಬಳಕೆಗೆ ಕುರಿತು ಗೃಹ ಇಲಾಖೆ ವ್ಯಾಪ್ತಿಗೆ ಅನ್ವಯ ಆಗುವಂತೆ ನಾಳೆ(ಜ.25)  ಮಾರ್ಗಸೂಚಿಯನ್ನು ಪ್ರಕಟಿಸುತ್ತೇವೆ. ಸ್ಫೋಟಕಗಳ ಬಳಕೆ ಬಗ್ಗೆ  ಪರವಾನಗಿದಾರರು ಮತ್ತು ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಹಳೆಯ ಮಾರ್ಗಸೂಚಿಗಳನ್ನು ನೋಡಿಕೊಂಡು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News