ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ಸೋಮವಾರ ನಟಿ ರಾಗಿಣಿ ಪರಪ್ಪನ ಅಗ್ರಹಾರದಿಂದ ಬಿಡುಗಡೆ

Update: 2021-01-24 12:53 GMT

ಬೆಂಗಳೂರು, ಜ.24:  ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ನಟಿ ರಾಗಿಣಿ ನಾಳೆ(ಜ.25) ಇಲ್ಲಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಲಿದ್ದಾರೆ ಎಂದು ವರದಿಯಾಗಿದೆ.

141 ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವ ರಾಗಿಣಿ ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಮಂಜೂರು ಆಗಿರುವ ಹಿನ್ನೆಲೆ ಬಂಧಿಖಾನೆ ನಿಯಮದಡೆ ಸೋಮವಾರ ಹೊರಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಗಿಣಿಗೆ ಜಾಮೀನು ಮಂಜೂರು ಮಾಡಲು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದ್ದು, 3 ಲಕ್ಷ ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಹಾಗೂ 15 ದಿನಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು ಎಂಬಿತ್ಯಾದಿ ಷರತ್ತುಗಳು ವಿಧಿಸಲಾಗಿದೆ. ಈ ಷರತ್ತುಗಳನ್ನು ಪೂರೈಸಲು ರಾಗಿಣಿ ಪರ ವಕೀಲರು ಸಮಯಾವಕಾಶ ಕೇಳಿದ್ದು, ರವಿವಾರ ರಜೆ ದಿನವಾಗಿರುವುದರಿಂದ ಸೋಮವಾರ ಮಧ್ಯಾಹ್ನದೊಳಗೆ ಷರತ್ತಿನ ಅನ್ವಯ ಪರಿಶೀಲನೆ ನಂತರ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಇನ್ನು ಇದೇ ಪ್ರಕರಣದಲ್ಲಿ ಮತ್ತೋರ್ವ ನಟಿ ಸಂಜನಾ ಗಲ್ರಾಣಿ ಅವರು ಸಹ ಬಂಧಿತರಾಗಿದ್ದರು. ಅವರು ಈ ಮೊದಲೇ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News