ಕುಂಬಾರ ಸಮುದಾಯಕ್ಕೆ ನಿಗಮ ಸ್ಥಾಪನೆ ಅಗತ್ಯವಿದೆ: ಡಾ.ಅಶ್ವತ್ಥ ನಾರಾಯಣ

Update: 2021-01-24 13:02 GMT

ಬೆಂಗಳೂರು, ಜ.24: ಕುಂಬಾರ ಸಮುದಾಯದ ಸರ್ವತೋಮುಖ ಆಭಿವೃದ್ದಿ ನಿಗಮ ಸ್ಥಾಪನೆ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರೊಂದಿಗೆ ಚರ್ಚಿಸಲಾಗುವುದೆಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ರವಿವಾರ ಕುಂಬಾರ ಯುವಸೈನ್ಯ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾಗಿರುವ ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಗುಡಿಕೈಗಾರಿಕೆಗೆ ಕುಂಬಾರ ಸಮುದಾಯದ ಕೊಡುಗೆ ಹೆಚ್ಚಿದೆ. ಈ ಸಮುದಾಯದ ಏಳ್ಗೆಗಾಗಿ ಪ್ರತ್ಯೇಕ ನಿಗಮ ಸ್ಥಾಪನೆ ಆಗಬೇಕಿದೆ ಎಂದು ಹೇಳಿದ್ದಾರೆ.

ಗ್ರಾಮಪಂಚಾಯತ್ ಆಯ್ಕೆಯಾಗಿರುವ ಸದಸ್ಯರು, ಉತ್ತಮ ಕಾರ್ಯದಲ್ಲಿ ತೊಡಗುವ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯುವಂತಾಗಬೇಕು. ಈ ನಿಟ್ಟಿನಿಲ್ಲಿ ಮತದಾರರು ನೀಡಿರುವ ಗೆಲುವು ನಿಮ್ಮ ಬೆಳವಣಿಗೆಗೆ ದಾರಿದೀಪವಾಗಲಿ ಎಂದು ಅವರು ಅಭಿನಂದಿಸಿದರು.

ಅಭಿನಂದನಾ ಕಾರ್ಯಕ್ರಮದಲ್ಲಿ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಛಲವಾದಿ ನಾರಾಯಣಸ್ವಾಮಿ, ಯುವಸೈನ್ಯ ರಾಜ್ಯಾಧ್ಯಕ್ಷ ಶಂಕರ್ ಶೆಟ್ಟಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News