ರೈತರ ಟ್ರ್ಯಾಕ್ಟರ್ ಪ್ರತಿಭಟನೆಗೆ ಎಫ್‌ಐಟಿಯು ಬೆಂಬಲ

Update: 2021-01-24 13:27 GMT

ಬೆಂಗಳೂರು, ಜ.24: ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (FITU) ರೈತ ವಿರೋಧಿ ಕಾಯಿದೆ ವಿರುದ್ಧ ಗಣರಾಜ್ಯೋತ್ಸವ ದಿನದಂದು ನಡೆಯಲಿರುವ ರೈತರ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಲಿದೆ ಮತ್ತು ರಾಷ್ಟ್ರಾದ್ಯಂತ ಇದನ್ನು ಬೆಂಬಲಿಸಲಿದೆ. ಇಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಎಫ್‌ಐಟಿಯು ರಾಷ್ಟ್ರೀಯ ಅಧ್ಯಕ್ಷ ಸುಬ್ರಮಣಿ ಆರ್ಮುಗಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆಯನ್ನು ಬಲವಾಗಿ ಖಂಡಿಸಲಾಯಿತು. ಅದೇ ರೀತಿ ಅಸಂವಿಧಾನಿಕವಾದ ಕಾರ್ಮಿಕ ಕಾಯಿದೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಅದೇ ರೀತಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಸಿಗುವಂತಹ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಯಿತು.

ಪ್ರಧಾನ ಮಂತ್ರಿಯ ಆತ್ಮ ನಿರ್ಭರತೆ ಯೋಜನೆ ಸಂಪೂರ್ಣ ಬೋಗಸ್ ಆಗಿದೆ. ಇದರಿಂದ ನಿರುದ್ಯೋಗಿಗಳಿಗೆ ಯಾವುದೇ ಪ್ರಯೋಜನವಾಗಿಲ್ಲ, ಬದಲಾಗಿ ಇನ್ನಷ್ಟು ಸಾಲಗಾರರನ್ನಾಗಿ ಮಾಡಿದೆ ಎಂದು ಎಫ್‌ಐಟಿಯು ಆರೋಪಿಸಿದೆ.

ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಝಾಕ್ ಪಾಲೇರಿ ಸಹಿತ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ವೆಸ್ಟ್ ಬೆಂಗಾಲ್ ಸೇರಿ ವಿವಿಧ ರಾಜ್ಯಗಳಿಂದ 11 ಮಂದಿ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News