ಕೇಂದ್ರ ಸರಕಾರದ ವಿರುದ್ಧ ಅನ್ನದಾತರ ಆಕ್ರೋಶ: ಜ.26ರಂದು ಬೆಂಗಳೂರಿನಲ್ಲೂ ಬೃಹತ್ 'ಟ್ರ್ಯಾಕ್ಟರ್ ಪರೇಡ್'

Update: 2021-01-24 13:59 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.24: ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಕರೆ ನೀಡಿರುವ ಟ್ರ್ಯಾಕ್ಟರ್ ಚಳವಳಿಗೆ ರಾಜ್ಯದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುವ ಮಾದರಿಯಲ್ಲಿಯೇ ಜ.26ರಂದು ಬೆಂಗಳೂರಿನಲ್ಲೂ ಬೃಹತ್ `ಟ್ರ್ಯಾಕ್ಟರ್ ಪರೇಡ್' ನಡೆಯಲಿದೆ.

ಈ ಕುರಿತು ರವಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜ.26ರಂದು ಗಣರಾಜ್ಯೋತ್ಸವ ದಿನದ ಧ್ವಜಾರೋಹಣ ನೆರವೇರಿಸಿ, ನಾಡಿಗೆ ಸಂದೇಶ ನೀಡಿದ ನಂತರ, ಇಲ್ಲಿನ ತುಮಕೂರು ರಸ್ತೆ ನೈಸ್ ಜಂಕ್ಷನ್‍ನಿಂದ ಫ್ರೀಡಂ ಪಾರ್ಕ್ ಮೈದಾನದವರೆಗೂ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದ್ದು, 10 ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್ ಗಳು ಭಾಗಿಯಾಗುವ ನಿರೀಕ್ಷೆ ಇದೆ ಎಂದರು.

ಟ್ರ್ಯಾಕ್ಟರ್ ಗಳು ಮಾತ್ರವಲ್ಲದೆ, ಟ್ರಕ್‍ಗಳು, ಕಾರುಗಳು, ಬಸ್ಸುಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ದೊಡ್ಡ ಪ್ರಮಾಣದಲ್ಲಿ ರೈತರು ಈ ಪರೇಡ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ದಿಲ್ಲಿಯಲ್ಲಿ ರೈತರ ಪರೇಡ್‍ಗೆ ಅನುಮತಿ ನೀಡಿದ್ದಾರೆ. ಹಾಗಾಗಿ ಇಲ್ಲಿಯೂ ರೈತರ ಪರೇಡ್‍ಗೆ ಸರಕಾರ ಅಡ್ಡಿಪಡಿಸುವುದಿಲ್ಲ ಎನ್ನುವ ನಂಬಿಕೆ ಇದೆ. ಒಂದು ವೇಳೆ ಹೆದ್ದಾರಿಯಲ್ಲಿ ನಮ್ಮನ್ನು ತಡೆಯುವ ಪ್ರಯತ್ನ ನಡೆಸಿದರೆ ಆ ಹೆದ್ದಾರಿಗಳು ಬಂದ್ ಆಗಲಿವೆ ಎನ್ನುವುದು ಸರಕಾರಕ್ಕೆ ತಿಳಿದಿರಲಿ ಎಂದು ಅವರು ಎಚ್ಚರಿಕೆ ನೀಡಿದರು.

ಅಲ್ಲದೆ, ಕೇಂದ್ರ ಸರಕಾರ ಈವರೆಗೂ 11 ಬಾರಿ ಸಭೆ ನಡೆಸಿದರೂ ಯಶಸ್ವಿಯಾಗಿಲ್ಲ. ಮೂರೂ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕು. ಎರಡು ವರ್ಷ ಜಾರಿ ಮಾಡಲ್ಲ ಎಂದರೆ, ನಂತರ ಜಾರಿ ಮಾಡುತ್ತಾರೆ ಎಂದೇ ಅರ್ಥ. ಹಾಗಾಗಿ ಕಾಯ್ದೆ ವಾಪಸ್ ಪಡೆಯುವವರೆಗೂ ಹೋರಾಟ ನಡೆಯಲಿದೆ. ಈಗಲೂ ಸರಕಾರ ನಿರ್ಧಾರ ಬದಲಿಸದೇ ಇದ್ದಲ್ಲಿ ಹೋರಾಟ ಮತ್ತೊಂದು ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಎಲ್ಲಿಂದ ಎಲ್ಲಿಗೆ?: ನೈಸ್ ಜಂಕ್ಷನ್‍ನಿಂದ ಹೊರಡುವ ಪರೇಡ್ ಗೊರಗುಂಟೆಪಾಳ್ಯ, ಯಶವಂತಪುರ ಮತ್ತು ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ವೃತ್ತದಿಂದ ಮಲ್ಲೇಶ್ವರಂ, ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್, ಆನಂದರಾವ್ ಸರ್ಕಲ್ ಮೂಲಕ ಫ್ರೀಡಂ ಪಾರ್ಕ್ ತಲುಪಿ ಅಲ್ಲಿ ಪರೇಡ್ ಮುಕ್ತಾಯಗೊಳ್ಳಲಿದೆ. ರೈತರು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೋಡಿಹಳ್ಳಿ ಮಾಹಿತಿ ನೀಡಿದರು.

ಬೆಂಗಳೂರಿಗೆ ಸೀಮಿತ

ಜ.26ರಂದು ನಡೆಯುವ ರೈತರ ಪರೇಡ್ ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದು, ರಾಜ್ಯದ ಇತರ ಕಡೆ ನಡೆಯಲ್ಲ. ಆದರೆ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ಬದಲಿಸಿಕೊಂಡ ನಂತರ ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ನಡೆಸುವ ಕುರಿತು ಚರ್ಚಿಸಿ ನಿರ್ಧರಿಸಲಾಗುತ್ತದೆ.

-ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ

ಕಾಂಗ್ರೆಸ್ ಬೆಂಬಲ

ರೈತರು ಜ.26ರಂದು ನಡೆಸಲಿರುವ ಟ್ರ್ಯಾಕ್ಟರ್ ಪರೇಡ್ ಚಳುವಳಿಯನ್ನು ಬೆಂಬಲಿಸಿ ಟ್ರ್ಯಾಕ್ಟರ್ ನೊಂದಿಗೆ ಕಿಸಾನ್ ನಾಯಕರು, ಪದಾಧಿಕಾರಿಗಳು ಭಾಗವಹಿಸುತ್ತಾರೆ.

-ಸಚೀನ್ ಮೀಗಾ, ಅಧ್ಯಕ್ಷ, ಕಿಸಾನ್ ವಿಭಾಗ ಕೆಪಿಸಿಸಿ

ಐಕ್ಯ ಹೋರಾಟ ಸಮಿತಿಯೂ ಭಾಗಿ

ಜ.26ರ ಟ್ರ್ಯಾಕ್ಟರ್ ಪರೇಡ್‍ಗೆ ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬೆಂಬಲ ಸೂಚಿಸಿದ್ದು, ಅಂದು ಬೃಹತ್ ಜನಗಣರಾಜ್ಯೋತ್ಸವ ಪರೇಡ್ ನಡೆಸಲು ಕರೆ ನೀಡಿದೆ.

ತಡೆಯುವ ಪ್ರಯತ್ನ ಕೈಬಿಡಿ

ಜ.26 ರಂದು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಬೃಹತ್ ಟ್ರ್ಯಾಕ್ಟರ್ ಜಾಥಾ ಹಮ್ಮಿಕೊಂಡಿದ್ದೇವೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ಟ್ರ್ಯಾಕ್ಟರ್ ಗಳು ಬೆಂಗಳೂರಿನತ್ತ ಹೊರಟಿವೆ. ಆದರೆ ಪೊಲೀಸರು ರೈತರ ಟ್ರ್ಯಾಕ್ಟರ್ ಗಳನ್ನು ತಡೆಯುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಪೊಲೀಸರು ಗೌರವಯುತವಾಗಿ ಟ್ರ್ಯಾಕ್ಟರ್ ಗಳು ಬೆಂಗಳೂರಿಗೆ ಬರಲು ಅನುಮತಿ ಕೊಡಬೇಕು. ಇಲ್ಲಿದಿದ್ದರೆ ಸಂಚಾರ ಅಸ್ತವ್ಯಸ್ತವಾದರೆ ಸರಕಾರವೇ ಜವಾಬ್ದಾರಿ.

-ಬಡಗಲಪುರ ನಾಗೇಂದ್ರ, ರೈತ ಮುಖಂಡ

ಅನುಮತಿ ಕುರಿತು ಚರ್ಚೆ

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.26ರಂದು ಟ್ರ್ಯಾಕ್ಟರ್ ಜಾಥಾ ನಡೆಸುವ ಸಂಬಂಧ ಅನುಮತಿ ನೀಡುವ ಕುರಿತು ಚರ್ಚೆ ನಡೆಸಲಾಗುವುದು.ಅಲ್ಲದೆ,ಇನ್ನು ಯಾವ ಮಾರ್ಗ, ಎಷ್ಟು ಮಂದಿ ಜಾಥಾ ನಡೆಸಲಿದ್ದಾರೆ ಎಂಬುದನ್ನು ತೀರ್ಮಾನಿಸಿದ ಬಳಿಕ ಅಂತಿಮವಾಗಿ ಅನುಮತಿ ನೀಡಬೇಕೋ, ಬೇಡವೋ ಎಂದು ತೀರ್ಮಾನಿಸಲಾಗುವುದು.

-ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News