ಹುಣಸೋಡು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲ್ಲ: ಸಚಿವ ಆರ್.ಅಶೋಕ್

Update: 2021-01-24 14:19 GMT

ಚಿಕ್ಕಮಗಳೂರು, ಜ.24: ಶಿವಮೊಗ್ಗ ಜಿಲ್ಲೆ ಹುಣಸೋಡು ಕಲ್ಲುಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಿಲ್ಲ. ಈ ತನಿಖೆಯನ್ನು ನಡೆಸಲು ರಾಜ್ಯದ ಪೊಲೀಸರೇ ಸಮರ್ಥರಿದ್ದು, ಅವರೇ ತನಿಖೆ ನಡೆಸಲಿದ್ದಾರೆ. ಶಿವಮೊಗ್ಗ ಸ್ಫೋಟ ಪ್ರಕರಣವನ್ನು ಪೊಲೀಸರು ಸಮಗ್ರವಾಗಿ ತನಿಖೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದ ನಿಮಿತ್ತ ರವಿವಾರ ನಗರಕ್ಕಾಮಿಸಿದ್ದ ವೇಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ಸ್ಫೋಟಗೊಂಡ ವಸ್ತುಗಳು ಮೈನಿಂಗ್ ಉದ್ದೇಶಕ್ಕೆ ಬಂದಿದೆ. ಬೇರೆ ಉದ್ದೇಶಕ್ಕಾಗಿ ಬಂದಿದ್ದರೆ ದೊಡ್ಡ ಅನಾಹುತವವೇ ನಡೆಯುತ್ತಿತ್ತು. ಸ್ಫೋಟಕ ವಸ್ತುಗಳನ್ನು ಬೇರೆ ರಾಜ್ಯದಿಂದ ಯಾರು ಕೊಡುತ್ತಾರೆ, ಅದನ್ನು ಇಲ್ಲಿಗೆ ಯಾರು ತರುತ್ತಾರೆ, ಹೊರ ರಾಜ್ಯದಿಂದ ಪೊಲೀಸರ ಕಣ್ತಪ್ಪಿಸಿ ಶಿವಮೊಗ್ಗಕ್ಕೆ ಸ್ಫೋಟಕಗಳು ಹೇಗೆ ಬಂತೆಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದರು.

ಸ್ಫೋಟ ಸಂಭವಿಸಿದ ಬಳಿಕ ಕಂದಾಯ ಇಲಾಖೆಯ ಡಿಸಾಸ್ಟರ್ ಟೀಂ ಅನ್ನು ಘಟನಾ ಸ್ಥಳಕ್ಕೆ ಕಳಿಸಿಕೊಟ್ಟಿದ್ದೇನೆ. ಸ್ಫೋಟಕ ಸಾಮಾಗ್ರಿಗಳನ್ನು ಕೊಳ್ಳಲು ಇನ್ನಷ್ಟು ಬಿಗಿ ಕಾನೂನು ರೂಪಿಸಲಾಗುತ್ತಿದೆ. ಸ್ಫೋಟಕ ಸಾಮಗ್ರಿಗಳ ಶೇಖರಣೆಗೆ ಕ್ವಾರಿಗಳಲ್ಲಿ ಭದ್ರತೆ ವ್ಯವಸ್ಥೆಯನ್ನು ನೋಡಿ ಅನುಮತಿ ಕೊಡಬೇಕೆಂದ ಅವರು, ಅನೇಕ ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು. ಆಂಧ್ರ ಪ್ರದೇಶದಿಂದ ಸ್ಫೋಟಕ ವಸ್ತಗಳು ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದರು.

ಸಚಿವ ಸಂಪುಟ ಖಾತೆ ಕ್ಯಾತೆ ವಿಚಾರ ಮುಗಿದ ಅಧ್ಯಾಯ, ಎಲ್ಲರೂ ಸಿಎಂ ಜೊತೆ ಇದ್ದಾರೆ. ಗೋಪಾಲಯ್ಯ, ಎಂಟಿಬಿ ನಾಗರಾಜ್, ಸುಧಾಕರ್, ಶಂಕರ್ ಜೊತೆ ಮಾತಾನಾಡಿದ್ದೇನೆ. ಎಲ್ಲರೂ ಸಮಾಧಾನವಾಗಿ ಶಾಂತವಾಗಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದ ಅವರು, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಸಿಎಂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News