ರಾಜ್ಯದ ಮಹಿಳೆಯರ ರಕ್ಷಣೆಗಾಗಿ ಲವ್ ಜಿಹಾದ್ ವಿರುದ್ಧ ಶೀಘ್ರವೇ ಕಾಯ್ದೆ ಜಾರಿ: ನಳಿನ್ ಕುಮಾರ್ ಕಟೀಲು

Update: 2021-01-24 14:58 GMT

ಹೊಸಪೇಟೆ, ಜ.24: ರಾಜ್ಯ ಸರಕಾರವು ಶೀಘ್ರವೇ ಲವ್ ಜಿಹಾದ್ ವಿರುದ್ಧ ಕಾಯ್ದೆ ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯದ ಮಹಿಳೆಯರಿಗೆ ರಕ್ಷಣೆ ಒದಗಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.

ರವಿವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವು ನುಡಿದಂತೆ ನಡೆಯುತ್ತಿದೆ. ಈಗಾಗಲೇ ಅದು ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.

ಹಿಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಮಹಿಳೆಯರಿಗೆ ಅನ್ಯಾಯ ಆಗುವುದನ್ನು ತಡೆಯುವಂತೆ ಕೋರ್ಟ್ ನೀಡಿದ್ದ ತೀರ್ಪನ್ನೇ ಅನುಷ್ಠಾನಗೊಳಿಸಿರಲಿಲ್ಲ. ಮಹಿಳೆಗೆ ಎಲ್ಲೇ ಅನ್ಯಾಯವಾದರೂ ಅದನ್ನು ತಡೆಯಬೇಕು ಎಂಬ ಚಿಂತನೆಯನ್ನು ಜಾರಿಗೊಳಿಸಲು ಕೇಂದ್ರ ಸರಕಾರವು ತ್ರಿವಳಿ ತಲಾಕ್ ರದ್ದು ಮಾಡುವ ಮಹತ್ವದ ನಿರ್ಧಾರ ಮಾಡಿದೆ ಎಂದು ಅವರು ಹೇಳಿದರು.

ಪರಿವರ್ತನೆಯ ಯುಗ ಈಗಿನದು. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ವಿವರವನ್ನು ಜನರಿಗೆ ತಲುಪಿಸಬೇಕು. ಗೀತಾ ವಿವೇಕಾನಂದರ ತಂಡವು ಸಮರ್ಥವಾಗಿ ಕಾರ್ಯ ನಿರ್ವಹಿಸಿ ಪ್ರತಿ ಬೂತ್‍ನಲ್ಲಿ ಮಹಿಳಾ ಕಾರ್ಯಕರ್ತರನ್ನು ಸಂಘಟಿಸಬೇಕು ಎಂದು ನಳಿನ್ ಕುಮಾರ್ ಕಟೀಲು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪುರಂದೇಶ್ವರಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜಿಲ್ಲೆ, ಸಂಸದ ದೇವೇಂದ್ರಪ್ಪ, ಮುಖಂಡರಾದ ಶಶಿಕಲಾ ಟೆಂಗಳಿ, ಜೆ.ಶಾಂತಾ, ಅಶ್ವತ್ಥನಾರಾಯಣ್, ಹೇಮರಾಜ ನಾಯಕ್, ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ರಾಜ್ಯ ಸಫಾಯಿ ಕರ್ಮಚಾರಿ ಮಂಡಳಿ ಅಧ್ಯಕ್ಷ ಹನುಮಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News