ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅಗತ್ಯ ಅನುದಾನ ಒದಗಿಸಲು ಕೋರಿ ಸಿಎಂಗೆ ತನ್ವೀರ್ ಸೇಠ್ ಪತ್ರ

Update: 2021-01-24 15:25 GMT

ಬೆಂಗಳೂರು, ಜ.24: ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ 2021-22ನೆ ಸಾಲಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ವಿವಿಧ ಮುಂದುವರಿದ ಮತ್ತು ಹೊಸ ಯೋಜನೆಗಳಿಗೆ ಅನುದಾನ ಕಾಯ್ದಿರಿಸುವ ಮತ್ತು ಯೋಜನೆಗಳ ಅನುಷ್ಠಾನಕ್ಕಾಗಿ ಅವಶ್ಯಕತೆ ಇರುವ ಅನುದಾನವನ್ನು ಒದಗಿಸುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ್ ಪಾಟೀಲ್‍ಗೆ ಮಾಜಿ ಸಚಿವ ತನ್ವೀರ್ ಸೇಠ್ ಪತ್ರ ಬರೆದಿದ್ದಾರೆ.

ರಾಜ್ಯದ ವಕ್ಫ್ ಆಸ್ತಿಗಳ ಎರಡನೆ ಸರ್ವೆ ಕಾರ್ಯ ಪೂರ್ಣಗೊಳಿಸಲು 25 ಕೋಟಿ ರೂ., ರಾಜ್ಯ ವಕ್ಫ್ ಕೌನ್ಸಿಲ್‍ಗೆ 50 ಕೋಟಿ ರೂ., ರಾಜ್ಯ ವಕ್ಫ್ ಮಹಿಳಾ ಪ್ರತಿಷ್ಠಾನದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 59 ಕೋಟಿ ರೂ., ಪ್ರಮುಖ ಮತ್ತು ಸೂಕ್ಷ್ಮ ವಕ್ಫ್ ಆಸ್ತಿಗಳ ಸಂರಕ್ಷಣೆಗೆ(ಕಾಂಪೌಂಡ್ ನಿರ್ಮಾಣ) 50 ಕೋಟಿ ರೂ., ವಕ್ಫ್ ಪ್ರವಾಸಿ, ಯಾತ್ರಾ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 10 ಕೋಟಿ ರೂ.ಅನುದಾನ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿರುವ ಎಲ್ಲ ವಕ್ಫ್ ಸಂಸ್ಥೆಗಳ ವಿವರವನ್ನು ಗಣಕೀಕರಿಸಲು ನೂತನ ವೆಬ್ ಪೋರ್ಟಲ್ ಪ್ರಾರಂಭ ಮತ್ತು ನಿರ್ವಹಣೆಗಾಗಿ 2 ಕೋಟಿ ರೂ., ವಕ್ಫ್ ಸಂಸ್ಥೆಗಳ ಅಭಿವೃದ್ಧಿ, ಮಾರ್ಪಾಡು ಮತ್ತು ಜೀರ್ಣೋದ್ಧಾರಕ್ಕೆ 50 ಕೋಟಿ ರೂ.ಗಳನ್ನು ಒದಗಿಸುವಂತೆ ತನ್ವೀರ್ ಸೇಠ್ ಕೋರಿದ್ದಾರೆ.

ಅಲ್ಪಸಂಖ್ಯಾತರ ನಿರ್ದೇಶನಾಲಯ: ಮುಖ್ಯಮಂತ್ರಿಯವರ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗೆ 800 ಕೋಟಿ ರೂ., ಬಿದಾಯಿ ಯೋಜನೆಗೆ 60 ಕೋಟಿ ರೂ., ಮದ್ರಸಾಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು 50 ಕೋಟಿ ರೂ.ಸಹಾಯ ಧನ, ಅಲ್ಪಸಂಖ್ಯಾತರಿಗಾಗಿ ಸಮುದಾಯ ಭವನ, ಶಾದಿಮಹಲ್‍ಗಳ ನಿರ್ಮಾಣಕ್ಕಾಗಿ 50 ಕೋಟಿ ರೂ, ಅಲ್ಪಸಂಖ್ಯಾತರ ನೋಡಲ್ ಕೇಂದ್ರ, ಜಿಲ್ಲಾ ಮತ್ತು ತಾಲೂಕು ಮಾಹಿತಿ ಕೇಂದ್ರಗಳ ನಿರ್ವಹಣೆಗೆ 5 ಕೋಟಿ ರೂ.ಗಳನ್ನು ಒದಗಿಸುವಂತೆ ಅವರು ಮನವಿ ಮಾಡಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಸರಕಾರಿ ಶಾಲಾ ಮಕ್ಕಳಿಗೆ ಚಾಲ್ತಿಯಲ್ಲಿರುವ ಉಚಿತ ಪಠ್ಯಪುಸ್ತಕ, ಮಧ್ಯಾಹ್ನ ಉಪಹಾರ ಯೋಜನೆ, ಕ್ಷೀರಭಾಗ್ಯ, ಉಚಿತ ಸಮವಸ್ತ್ರ, ಶೂ ಮತ್ತು ಸಾಕ್ಸ್ ಮತ್ತು ಬೈಸಿಕಲ್ ಸರಬರಾಜು ಯೋಜನೆಯನ್ನು ಯಥಾವತ್ತಾಗಿ ಅಲ್ಪಸಂಖ್ಯಾತರ ಸರಕಾರಿ ಮೌಲಾನಾ ಆಝಾದ್ ಶಾಲೆಗಳಿಗೂ ವಿಸ್ತರಿಸುವಂತೆ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ.

ಸರಕಾರಿ ಉರ್ದು ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 100 ಕೋಟಿ ರೂ., ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿವೇತನ ನೀಡಲು 40 ಕೋಟಿ ರೂ., ಅಲ್ಪಸಂಖ್ಯಾತ ಸಮುದಾಯದ ಪದವೀಧರ ನಿರುದ್ಯೋಗಿ ಯುವಕರು ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಆನ್‍ಲೈನ್ ಮಾಹಿತಿ ಮೂಲಕ ಪಡೆಯಲು ನಾಗರಿಕ ಸೇವಾ ಕೇಂದ್ರ ಪ್ರಾರಂಭಿಸಲು 10 ಕೋಟಿ ರೂ. ಸಹಾಯಧನ ಒದಗಿಸುವಂತೆ ಅವರು ಕೋರಿದ್ದಾರೆ.

ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಅತ್ಯುತ್ತಮ ಫಲಿತಾಂಶ ಗಳಿಸಿದ ವಸತಿ ಶಾಲೆ, ಕಾಲೇಜುಗಳಿಗೆ ಪ್ರತಿಭಾ ಪುರಸ್ಕಾರಕ್ಕೆ 50 ಲಕ್ಷ ರೂ. ಅನುದಾನ, ಜೈನ್, ಬೌದ್ಧ ಮತ್ತು ಸಿಖ್ ಸಮುದಾಯದ ಅಭಿವೃದ್ಧಿಗೆ 55 ಕೋಟಿ ರೂ., ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 90 ಕೋಟಿ ರೂ.ಗಳನ್ನು ಒದಗಿಸುವಂತೆ ಅವರು ಮನವಿ ಮಾಡಿದ್ದಾರೆ.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿರುವ ವಿವಿಧ ಕಾರ್ಯಕ್ರಮಗಳಿಗೆ ಮತ್ತು ಬಂಡವಾಳ ಹೂಡಿಕೆಗೆ 250 ಕೋಟಿ ರೂ., ವೃತ್ತಿ ಪ್ರೋತ್ಸಾಹ ಯೋಜನೆಯಡಿ ಮೆಕ್ಯಾನಿಕ್, ಕಾರ್ಪೆಂಟರ್, ಹಣ್ಣು ಮತ್ತು ತರಕಾರಿ ಮಾರಾಟ, ಬೇಕರಿ, ಪಂಚರ್ ಮತ್ತು ವೆಲ್ಡಿಂಗ್ ಶಾಪ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ರಿಪೇರಿ ಇತ್ಯಾದಿ ವೃತ್ತಿಗಳಿಗೆ ಬ್ಯಾಂಕ್ ಸಹಯೋಗದೊಂದಿಗೆ ಸಬ್ಸಿಡಿ ಸಾಲ ಮತ್ತು ಸಹಾಯಧನ ನೀಡುವ ಯೋಜನೆಗೆ 25 ಕೋಟಿ ರೂ.ಅನುದಾನ ನೀಡುವಂತೆ ಅವರು ಕೋರಿದ್ದಾರೆ.

ಸರಕು ವಾಹನ, ಪ್ರಯಾಣಿಕ ಆಟೋ ಮತ್ತು ಸರಕು ಆಟೋ ಖರೀದಿಗೆ 1 ಲಕ್ಷ ರೂ. ಸಬ್ಸಿಡಿ ಮತ್ತು ಕಾರ್, ಜೀಪ್ ಖರೀದಿಗೆ 3 ಲಕ್ಷ ರೂ.ಸಬ್ಸಿಡಿ ಆಧಾರಿತ ಬ್ಯಾಂಕ್ ಸಾಲ ಸೌಲಭ್ಯಕ್ಕಾಗಿ 40 ಕೋಟಿ ರೂ., ವಿಧವೆ, ವಿಚ್ಛೇದಿತ ಮತ್ತು ಏಕ ಮಹಿಳೆಯರಿಗೆ ನವೋದ್ಯಮ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಒದಗಿಸಲು 10 ಕೋಟಿ ರೂ., ಅರಿವು ಯೋಜನೆಯಡಿ ಸಾಲ ಸೌಲಭ್ಯಕ್ಕೆ 200 ಕೋಟಿ ರೂ.ಅನುದಾನ ಒದಗಿಸಲು ಅವರು ಮನವಿ ಮಾಡಿದ್ದಾರೆ.

ಉರ್ದು ಅಕಾಡಮಿ: 70 ವರ್ಷ ಮೀರಿದ ಪ್ರತಿಷ್ಠಿತ ಉರ್ದು ಸಾಹಿತಿಗಳಿಗೆ ಮಾಸಾಶನ ಮತ್ತು ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗೆ ಧನ ಸಹಾಯ ನೀಡುವ ಹೊಸ ಯೋಜನೆಗೆ 2 ಕೋಟಿ ರೂ., ಉರ್ದು ಅಕಾಡಮಿಯ ವಿವಿಧ ಕಾರ್ಯಕ್ರಮಗಳಿಗೆ ಅವಶ್ಯಕತೆ ಇರುವ ವಾರ್ಷಿಕ ಅನುದಾನ 2.50 ಕೋಟಿ ರೂ. ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಿ ಇದನ್ನು ಕಾರ್ಯರೂಪಕ್ಕೆ ತರುವಂತೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News