ಟ್ರ್ಯಾಕ್ಟರ್ ರ್‍ಯಾಲಿಗೆ ಅವಕಾಶ ನೀಡದಿದ್ದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ: ಬಡಗಲಪುರ ನಾಗೇಂದ್ರ ಎಚ್ಚರಿಕೆ

Update: 2021-01-24 17:28 GMT

ಮೈಸೂರು,ಜ.24: ಗಣರಾಜ್ಯೋತ್ಸವದ ದಿನ ಬೆಂಗಳೂರಿನಲ್ಲಿ ನಡೆಯುವ ಟ್ರ್ಯಾಕ್ಟರ್ ರ್‍ಯಾಲಿಗೆ ಅವಕಾಶ ನೀಡದಿದ್ದರೆ ಪ್ರತಿಭಟನೆಯ ಸ್ವರೂಪವೇ ಬದಲಾಗಲಿದೆ. ಅದಕ್ಕೆ ಅವಕಾಶ ನೀಡಬೇಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರವಿವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯಲ್ಲಿ ಕಳೆದ ಎರಡು ತಿಂಗಳುಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಜ.26 ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಯಲಿದೆ. ಅದಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿನಲ್ಲಿಯೂ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಿದ್ದು, ಟ್ರ್ಯಾಕ್ಟರ್ ರ್‍ಯಾಲಿಗೆ ಅವಕಾಶ ನೀಡದಿದ್ದರೆ ಶಾಂತಿಯುತ ಪ್ರತಿಭಟನೆಯ ಸ್ವರೂಪವೇ ಬದಲಾಗಲಿದೆ ಎಂದು ಹೇಳಿದರು. 

ರಾಜ್ಯದ ಹಲವು ಜಿಲ್ಲೆಗಳಿಂದ ಟ್ರ್ಯಾಕ್ಟರ್ ಗ ಳು ಬೆಂಗಳೂರಿಗೆ ಆಗಮಿಸಲಿವೆ. ಟ್ರಾಕ್ಟರ್ ಸಾಗುವ ಮಾರ್ಗಗಳಲ್ಲಿ ತಡೆಯಬಾರದು. ಒಂದು ವೇಳೆ ತಡೆದರೆ ರೈತರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಲಿದ್ದಾರೆ. ನಮಗೆ ಹಿಂಸೆ ಇಷ್ಟವಿಲ್ಲ, ಒಂದು ವೇಳೆ ಪ್ರತಿಭಟನೆಯ ಸ್ವರೂಪ ಬದಲಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಹೇಳಿದರು.

ದಿಲ್ಲಿಯಲ್ಲಿ ಲಕ್ಷಾಂತರ ಟ್ರ್ಯಾಕ್ಟರ್ ಗಳ ಮೆರವಣಿಗೆಗೆ ಅವಕಾಶ ನೀಡಲಾಗಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಈ ಸಂಬಂದ ಇನ್ನೂ ಯಾವುದೇ ನಿರ್ಣಯ ತಿಳಿಸಿಲ್ಲ, ಆದಷ್ಟು ಬೇಗ ಟ್ರ್ಯಾಕ್ಟರ್ ರ್‍ಯಾಲಿಗೆ ಅವಕಾಶ ನೀಡುವ ಕುರಿತು ತೀರ್ಮಾನ ಕೈಗೊಳ್ಳಬೇಕು, ಇಲ್ಲವಾದಲ್ಲಿ ನಮ್ಮ ಪ್ರತಿಭಟನೆಯ ಸ್ವರೂಪವೇ ಬದಲಾಗಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಹೊಸಕೋಟೆ ಬಸವರಾಜು, ಮೈಸೂರು ತಾಲ್ಲೂಕು ಅಧ್ಯಕ್ಷ ಪಿ.ಮರಂಕಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News