ಗಣಿಗಾರಿಕೆ ಅನಾಹುತಗಳಿಗೆ ಸಿಎಂ ಬೆಂಬಲವಿದೆಯೇ: ಕುಮಾರಸ್ವಾಮಿ ಪ್ರಶ್ನೆ

Update: 2021-01-24 17:37 GMT

ಮಂಡ್ಯ, ಜ.24: ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸುವುದಾಗಿ ಹೇಳುವ ಮೂಲಕ ಅದರಿಂದಾಗುತ್ತಿರುವ ಅನಾಹುತಗಳಿಗೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲವಾಗಿ ನಿಂತಿದ್ದಾರೆಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರವಿವಾರ ಮದ್ದೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಜಿ ಹಾಕಿದರೆ ಅಕ್ರಮ ಕಲ್ಲುಗಣಿಗಾರಿಕೆ ಸಕ್ರಮಗೊಳಿಸುವುದಾಗಿ ಹೇಳಿರುವುದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು. ಅಕ್ರಮ ಗಣಿಗಾರಿಕೆ ಸಕ್ರಮಗೊಳಿಸುವುದು ಬೇರೆ. ಆದರೆ, ಸಕ್ರಮದಿಂದ ಆಗುತ್ತಿರುವ ಅನಾಹುತ ತಡೆದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಮುಖ್ಯಮಂತ್ರಿಗಳ ಆದ್ಯತೆ ಆಗಬೇಕು ಎಂದು ಅವರು ಹೇಳಿದರು.

ಗಣಿಗಾರಿಕೆಯನ್ನು ಸಕ್ರಮಗೊಳಿಸುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿರುವುದು ಅನಾಹುತಗಳನ್ನು ನಿಯಂತ್ರಿಸುವುದಕ್ಕಾಗಿಯೋ ಅಥವಾ ಮತ್ತೆ ಮತ್ತೆ ಮರುಕಳಿಸಲೆಂದೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ತಾಕೀತು ಮಾಡಿದರು.

ಮಂಡ್ಯ ಜಿಲ್ಲೆಯ ಸೇರಿದಂತೆ ರಾಜ್ಯದ ಹಲವೆಡೆ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಸರಕಾರ ಪತ್ತೆಹಚ್ಚಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಎಫ್‍ಡಿಐ ನೇಮಕಾತಿ ಪ್ರಶ್ನೆ ಪ್ರತಿಕೆ ಮಾತ್ರವಲ್ಲ, ಹೀಗೆಯೇ ಹಲವಾರು ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗುತ್ತಿರುವುದು ರಾಜ್ಯದಲ್ಲಿ ಸಾಮಾನ್ಯವಾಗಿದೆ. ಹಾಗಾಗಿ ಇದು ಸರಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಟೀಕಿಸಿದರು.

ಶ್ರೀರಂಗಪಟ್ಟಣ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರದಿಂದ ಬಿಡುಗಡೆಯಾಗಿದೆ. ಆದರೆ, ಯೋಜನೆ ಅನುಷ್ಠಾನಕ್ಕೆ ತರದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಜಿಲ್ಲಾಧಿಕಾರಿ ವಿರುದ್ಧ ಜೆಡಿಎಸ್ ಶಾಸಕರು ನಾಳೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಶಾಸಕ ಡಿ.ಸಿ.ತಮ್ಮಣ್ಣ, ವಿಧಾನಪರಿಷತ್ ಸದಸ್ಯ ಎನ್.ಅಪ್ಪಾಜೀಗೌಡ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಪುರಸಭೆ ಸದಸ್ಯೆ ಬಿ.ಸಿ.ಸರ್ವಮಂಗಳಾ, ಕಾರ್ತಿಕ್ ಸಿದ್ದರಾಜು, ರಮೇಶ್, ನಿತೀನ್, ಇತರೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News