ಜ.26ರಂದು ಬೆಂಗಳೂರಿಗೆ ರೈತರ ಟ್ರ್ಯಾಕ್ಟರ್ ಲಗ್ಗೆ: ಅನುಮತಿ ಇಲ್ಲ ಎಂದ ಪೊಲೀಸ್ ಆಯುಕ್ತ

Update: 2021-01-25 13:10 GMT

ಬೆಂಗಳೂರು, ಜ.25: ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ನಾಳೆ(ಜ.26) ಕರೆ ನೀಡಿರುವ ಟ್ರ್ಯಾಕ್ಟರ್ ಪರೇಡ್‍ಗೆ ಹಲವು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಗಳು ಹಾಗೂ ಇತರೆ ವಾಹನಗಳು ಬೆಂಗಳೂರಿನಲ್ಲಿ ಜಮಾವಣೆಗೊಳ್ಳಲಿದೆ.

ರೈತ ಸಂಘಟನೆಗಳು ಮಾತ್ರವಲ್ಲದೆ, ದಲಿತ, ಕಾರ್ಮಿಕ, ವಾಹನ ಚಾಲಕರ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿದ್ದು, ಮುಖ್ಯವಾಗಿ ಬೆಂಗಳೂರಿನ ಹೃದಯಭಾಗ ಸ್ವಾತಂತ್ರ್ಯ ಉದ್ಯಾನವನ ಮೈದಾನದಲ್ಲಿ ಪ್ರತಿಭಟನಾಕಾರರು ಭಾಗವಹಿಸಲಿದ್ದಾರೆ.

ಇನ್ನು, ಪ್ರತಿಭಟನೆ, ಮೆರವಣಿಗೆ ಸಂದರ್ಭದಲ್ಲಿ ಟ್ರ್ಯಾಕ್ಟರ್ ತರಲು ಪೊಲೀಸ್ ಇಲಾಖೆ ಅವಕಾಶ ನೀಡಿಲ್ಲ ಎಂದು ಮೂಲಗಳು ತಿಳಿಸಿದ್ದು, ಆದರೂ, ಟ್ರ್ಯಾಕ್ಟರ್ ಗಳನ್ನು ತಂದು, ಮೆರವಣಿಗೆ ನಡೆಸಲಾಗುವುದು. ಪೊಲೀಸರು ಟ್ರ್ಯಾಕ್ಟರ್ ತಡೆದು, ನಮ್ಮನ್ನು ಬಂಧಿಸುವ ಪ್ರಯತ್ನಕ್ಕೆ ಕೈಹಾಕಿದರೆ, ಜೈಲ್ ಭರೋ ಚಳುವಳಿ ನಡೆಸಲಾಗುವುದು ಎಂದು ರೈತ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ರೈತರು ಸೇರಿದಂತೆ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರಿನಿಂದ ಅತಿ ಹೆಚ್ಚಿನ ರೈತರು ಇಂದಿನ ಹೋರಾಟದಲ್ಲಿ ಭಾಗವಹಿಸಲಿದ್ದೇವೆ ಎಂದು ರೈತ ಮುಖಂಡರು ಘೋಷಿಸಿದ್ದಾರೆ.

ಟ್ರ್ಯಾಕ್ಟರ್ ಬರಲಿದೆ: ಇದರ ನಡುವೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಜನಗಣರಾಜ್ಯೊತ್ಸವ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಶಾಂತಿಯುತ ಟ್ರ್ಯಾಕ್ಟರ್ ಪರೇಡ್ ನಡೆಸಿಯೇ ತೀರುತ್ತೇವೆ ಎಂದರು.

ಟ್ರ್ಯಾಕ್ಟರ್ ಗಳನ್ನು ಎಲ್ಲೆಡೆ ಪೊಲೀಸರು ತಡೆಯುತ್ತಿದ್ದು, ಇದನ್ನು ನಾವು ಖಂಡಿಸುತ್ತೇವೆ. ಏನೇ ಸಮಸ್ಯೆಗಳಿದ್ದರೆ ಪೊಲೀಸ್ ಅಧಿಕಾರಿಗಳು ನಮ್ಮೊಂದಿಗೆ ಚರ್ಚೆ ಮಾಡಲಿ. ಆದರೆ, ನಿರ್ಬಂಧ ಹಾಕಲು ಪೊಲೀಸರು ಮುಂದಾದರೆ ಪರಿಸ್ಥಿತಿ ಕೈಮೀರುತ್ತದೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರಕಾರವೇ ನೇರ ಹೊಣೆ ಎಂದು ಅವರು ತಿಳಿಸಿದರು.

ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಮಂಗಳವಾರ ಎಲ್ಲಾ ಹೋರಾಟಗಾರರು ಆರಂಭದಲ್ಲಿ ನಗರದ ರೈಲ್ವೇ ನಿಲ್ದಾಣದ ಬಳಿ ಜಮಾವಣೆಗೊಂಡ ಬಳಿಕ ಅಲ್ಲಿಂದ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ನಡೆಸುತ್ತೇವೆ. ತದನಂತರ, ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಧ್ವಜಾರೋಹಣ ನಡೆಸಲಿದ್ದಾರೆ ಎಂದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿಯ ಕುಮಾರ್ ಸಮತಳ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ಕಾರ್ಮಿಕ ಒಕ್ಕೂಟದ ಕೆ.ವಿ ಭಟ್, ರೈತ ಮುಖಂಡ ಜೆ.ಎಂ.ವೀರಸಂಗಯ್ಯ ಸೇರಿದಂತೆ ಪ್ರಮುಖರಿದ್ದರು.

ಸಮಜಾಯಿಷಿ ನೀಡಿದರೂ ಒಪ್ಪದ ಆಯುಕ್ತ ?

ಶಾಂತಿಯುತವಾಗಿ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ನಡೆಸುತ್ತಿದ್ದೇವೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ, ಗಲಾಟೆ ನಡೆಯುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ರೈತರು ಸಮಜಾಯಿಷಿ ನೀಡಿದರೂ, ಅವರು ಅನುಮತಿಗೆ ಒಪ್ಪಲಿಲ್ಲ ಎಂದು ರೈತ ಮುಖಂಡರೊಬ್ಬರು ಆರೋಪಿಸಿದರು.

ವಾಹನಗಳು ಬರಲಿವೆ

ನಾಳೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 1 ಲಕ್ಷ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ. ಅದೇ ರೀತಿ, ಬೆಂಗಳೂರಿನಲ್ಲೂ ಎಲ್ಲಾ ವಾಹನಗಳಿಗೆ ರಾಷ್ಟ್ರಧ್ವಜ ಹಾಗೂ ಹಸಿರು ಬಾವುಟಕಟ್ಟಿ ನಗರದ ಹೊರವಲಯದ ನೈಸ್ ಜಂಕ್ಷನ್‍ನಿಂದ ಪ್ರಾರಂಭವಾಗುವ ಪರೇಡ್, ಫ್ರೀಡಂ ಪಾರ್ಕ್ ತಲುಪಲಿದೆ.

-ಕೋಡಿಹಳ್ಳಿ ಚಂದ್ರಶೇಖರ್, ಅಧ್ಯಕ್ಷ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಗಣರಾಜ್ಯೋತ್ಸವ ಆಚರಣೆಗೆ ನಮ್ಮ ಯಾವ ವಿರೋಧವಿಲ್ಲ. ಆದರೆ ಶಾಂತಿಯುತವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಿರೋಧಿಸಿ ಪರೇಡ್‍ನಡೆಸಲಿದ್ದೇವೆ.

-ಕುರುಬೂರು ಶಾಂತಕುಮಾರ್, ಅಧ್ಯಕ್ಷ, ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘ

ಟ್ರ್ಯಾಕ್ಟರ್ ಗೆ ಅನುಮತಿ ಇಲ್ಲ: ಕಮಲ್ ಪಂತ್

ರೈತರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಆದರೆ, ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಸಾಗಲು ಯಾವುದೇ ಕಾರಣಕ್ಕೂ ಅನುಮತಿ ನೀಡಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.26ರ ಗಣರಾಜ್ಯೋತ್ಸವ ಬಂದೋಬಸ್ತ್ ಜೊತೆಗೆ ರೈತರ ಪ್ರತಿಭಟನೆಗೂ ಪೊಲೀಸರನ್ನು ನಿಯೋಜಿಸಬೇಕಿದೆ. ಟ್ರ್ಯಾಕ್ಟರ್ ಮೂಲಕ ಪ್ರತಿಭಟಿಸಿದರೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಅಲ್ಲದೆ, ಎಂದೂ ಸಹ ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆ ನಡೆಸಿಲ್ಲ. ಈ ದಿಸೆಯಲ್ಲಿ ರೈತ ಪರ ಸಂಘಟನೆಗಳು ಶಾಂತಿಯುತ ಪ್ರತಿಭಟನೆಗೆ ಮಾತ್ರ ಸೀಮಿತ ಮಾಡಿಕೊಳ್ಳಬೇಕಿದೆ ಎಂದರು.

ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆಗೆ ಬಂದರೆ ಅವರನ್ನು ನಗರದೊಳಗೆ ಪ್ರವೇಶಿಸಲು ನಿರಾಕರಿಸಲಾಗುತ್ತದೆ. ಸಾಂಕೇತಿಕವಾಗಿಯೂ ಟ್ರ್ಯಾಕ್ಟರ್ ನಲ್ಲಿ ಪ್ರತಿಭಟನೆ ಮಾಡಬಾರದು ಎಂದು ತಿಳಿಸಿದ ಅವರು, ಬಸ್ಸು, ಬೈಕ್, ಕಾರುಹಾಗೂ ಜೀಪ್‍ಗಳಲ್ಲಿ ಬಂದು ಪ್ರತಿಭಟನೆ ನಡೆಸಲು ಅಭ್ಯಂತರವಿಲ್ಲ ಎಂದು ನುಡಿದರು.

ಬಿಗಿ ಪೊಲೀಸ್ ಬಂದೋಬಸ್ತ್

ಸಾವಿರಾರು ಸಂಖ್ಯೆಯಲ್ಲಿ ಒಂದೆಡೆ ಸೇರುವ ಹಿನ್ನೆಲೆ ನಗರ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ. ಮುಂಜಾಗ್ರತ ಕ್ರಮವಾಗಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಹೆಚ್ಚುವರಿಯಾಗಿ ಕೆಎಸ್‍ಆರ್‍ಪಿ ಹಾಗೂ ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಇನ್ನು, ಬೆಂಗಳೂರಿಗೆ ನಗರದ ಹೊರವಲಯದಿಂದ ಆಗಮಿಸುವ ವಾಹನಗಳ ಮೇಲೂ ನಿಗಾವಹಿಸಿದ್ದಾರೆ.

ವಾಟಾಳ್ ಬೆಂಬಲ

ಟ್ರ್ಯಾಕ್ಟರ್ ಪರೇಡ್‍ಗೆ ಬೆಂಬಲ ಘೋಷಿಸಿರುವ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಹೊಸದಿಲ್ಲಿಯ ಚಳವಳಿ ದೇಶಾದ್ಯಂತ ವ್ಯಾಪಿಸಿದೆ. ಇಂದು ರಾಜ್ಯದಲ್ಲೂ ತೀವ್ರ ಸ್ವರೂಪದ ಚಳವಳಿಯನ್ನು ರೈತರು ನಡೆಸುತ್ತಿರುವುದಕ್ಕೆ ಕನ್ನಡ ಒಕ್ಕೂಟ ಸಂಪೂರ್ಣ ಬೆಂಬಲ ನೀಡುತ್ತಿದೆ. ಎಲ್ಲರೂ ಬೆಂಬಲ ನೀಡುವ ಮೂಲಕ ರೈತರಿಗೆ ಬೆಂಬಲವಾಗಿ ನಿಲ್ಲಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News