ನನ್ನ ಅನುಮತಿ ಇಲ್ಲದೆ ಮಂಡ್ಯ ಉಸ್ತುವಾರಿ ಬದಲಾವಣೆ ಸಾಧ್ಯವಿಲ್ಲ: ಸಚಿವ ನಾರಾಯಣಗೌಡ

Update: 2021-01-25 13:46 GMT

ಬೆಂಗಳೂರು, ಜ. 25: ಮಂಡ್ಯ ಜಿಲ್ಲಾ ಉಸ್ತುವಾರಿ ಮೇಲೆ ಸಿ.ಪಿ.ಯೋಗೇಶ್ವರ್ ಅವರಿಗೆ ಏಕೆ ಆಸಕ್ತಿ, ನನ್ನನ್ನು ಮಂಡ್ಯ ಜಿಲ್ಲಾ ಉಸ್ತುವಾರಿಯಿಂದ ಬದಲಾಯಿಸಲು ಸಾಧ್ಯವೇ ಇಲ್ಲ. ನಾನು ಅನುಮತಿ ನೀಡದೆ ಹೇಗೆ ಬದಲಾವಣೆ ಮಾಡುತ್ತಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಅವರೇನು ಮಂಡ್ಯ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆಯೇ. ಅಲ್ಲಿ ಗೆದ್ದಿರುವುದು ನಾನು. ಅವರಿಗೆ ಏಕೆ ಮಂಡ್ಯ ಜಿಲ್ಲೆ ಉಸ್ತುವಾರಿ ಸ್ಥಾನ ನೀಡುತ್ತಾರೆ ಎಂದು ಕೇಳಿದರು.

ನಾನೇ ನೇತೃತ್ವ ವಹಿಸುವೆ: ಮಿತ್ರ ಮಂಡಳಿಯ ಶಾಸಕರೆಲ್ಲರೂ ಒಂದೆರಡು ದಿನಗಳಲ್ಲಿ ಒಟ್ಟಿಗೆ ಸೇರುತ್ತೇವೆ. ಬೇಕಿದ್ದರೆ ನಾನೇ ಅದರ ನೇತೃತ್ವ ವಹಿಸುತ್ತೇನೆ. ಕಾದು ನೋಡಿ ಎಂದ ನಾರಾಯಣಗೌಡ, ಹೋಟೆಲ್‍ನಲ್ಲಿ ಸೇರಿ ನಮ್ಮ ಒಗ್ಗಟ್ಟು ಸಾಬೀತು ಮಾಡುತ್ತೇವೆ ಎಂದು ಹೇಳಿದರು.

ಎಚ್.ವಿಶ್ವನಾಥ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಕಾನೂನು ತೊಡಕು ಇದೆ. ಹೀಗಾಗಿ ಅವರನ್ನು ಸದ್ಯಕ್ಕೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ. ನಾನೂ ಅವರ ಜೊತೆ ಇದ್ದೇನೆ, ಎಲ್ಲರೂ ಅವರವರ ಖಾತೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದ ಅವರು, ಖಾತೆಯಲ್ಲಿ ಒಳ್ಳೆ ಖಾತೆ, ಕೆಟ್ಟ ಖಾತೆ ಎಂದು ಏನೂ ಇಲ್ಲ. ಎಲ್ಲವೂ ಒಳ್ಳೆಯ ಖಾತೆಗಳೇ ಎಂದು ತಿಳಿಸಿದರು.

ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ನಮ್ಮ ಜಿಲ್ಲೆಗೆ ಕಾಫಿ, ಊಟಕ್ಕೆ ಬರಲಿ. ಪರಸ್ಪರ ನಮ್ಮ ಇಲಾಖೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದ ನಾರಾಯಣಗೌಡ, ಯಾವುದೇ ಕಾರಣಕ್ಕೂ ಮಂಡ್ಯ ಜಿಲ್ಲೆ ಉಸ್ತುವಾರಿ ಸ್ಥಾನ ಯಾವುದೇ ಸಂದರ್ಭದಲ್ಲಿಯೂ ಬಿಡುವ ಪ್ರಶ್ನೆಯೆ ಇಲ್ಲ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News