ಬಿಜೆಪಿಯಲ್ಲಿ ಶಮನವಾಗದ ಅಸಮಾಧಾನ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಮಾಧುಸ್ವಾಮಿ, ಆನಂದ್ ಸಿಂಗ್ ?

Update: 2021-01-25 13:50 GMT

ಬೆಂಗಳೂರು, ಜ.25: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರಸಾಹಸ ಪಟ್ಟು ಸಚಿವ ಸಂಪುಟ ವಿಸ್ತರಣೆ ಮಾಡಿದ ಬೆನ್ನಲ್ಲೆ, ಕೆಲವು ಸಚಿವರ ಖಾತೆಗಳನ್ನು ಅದಲು-ಬದಲು ಮಾಡಿದ್ದರಿಂದ ಉಲ್ಬಣಗೊಂಡಿದ್ದ ಅಸಮಾಧಾನ, ಮೂರನೇ ಬಾರಿ ಖಾತೆಗಳ ಮರು ಹಂಚಿಕೆಯಾದರೂ ಶಮನವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಇಲಾಖೆಯನ್ನು ಹಿಂಪಡೆದಿದ್ದರಿಂದ ಬೇಸರಗೊಂಡಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಅರಣ್ಯ ಇಲಾಖೆಯನ್ನು ಹಿಂಪಡೆದಿದ್ದರಿಂದ ಆನಂದ್ ಸಿಂಗ್ ಮುಖ್ಯಮಂತ್ರಿ ಬಗ್ಗೆ ಮುನಿಸಿಕೊಂಡಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಮ್ಮ ತಮ್ಮ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಜೆ.ಸಿ.ಮಾಧುಸ್ವಾಮಿಗೆ ಕಾನೂನು ಮತ್ತು ಸಣ್ಣ ನೀರಾವರಿ ಇಲಾಖೆಯ ಬದಲು ವೈದ್ಯಕೀಯ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಹಿಂಪಡೆದಿದ್ದರಿಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೇಸರಗೊಂಡಿದ್ದರು. ಅಲ್ಲದೆ, ಈ ಸಚಿವರು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಗೂ ಆಗಮಿಸದೆ ತಮ್ಮ ಅಸಮಾಧಾನ ಹೊರಹಾಕಿದ್ದರು.

ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಒಬ್ಬರಿಗೆ ವಹಿಸುವುದು ಸೂಕ್ತ. ಇಲಾಖೆಗಳ ವಿಭಜನೆಯಿಂದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಸುಧಾಕರ್ ಹೇರಿದ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಪುನಃ ಮಾಧುಸ್ವಾಮಿ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಖಾತೆಯನ್ನು ಸುಧಾಕರ್ ಗೆ ವಹಿಸಿ, ಮಾಧುಸ್ವಾಮಿಗೆ ಇದೀಗ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಜವಾಬ್ದಾರಿ ವಹಿಸಿದ್ದಾರೆ.

ಅರಣ್ಯ ಖಾತೆಯನ್ನು ಹಿಂಪಡೆದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಜವಾಬ್ದಾರಿ ಹೊತ್ತುಕೊಂಡಿದ್ದ ಆನಂದ್ ಸಿಂಗ್ ಬಳಿಯಿಂದ ಇದೀಗ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯನ್ನು ಹಿಂಪಡೆದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ.

ಖಾತೆಗಳನ್ನು ಪದೇ ಪದೇ ಬದಲಾಯಿಸುತ್ತಿರುವುದರಿಂದ ಬೇಸತ್ತಿರುವ ಆನಂದ್ ಸಿಂಗ್, ಮುಖ್ಯಮಂತ್ರಿಯನ್ನು ನೇರವಾಗಿ ಭೇಟಿ ಮಾಡಿ ತನಗೆ ಯಾವುದೆ ಸಚಿವ ಸ್ಥಾನ ಬೇಡ. ನನ್ನ ರಾಜೀನಾಮೆ ಅಂಗೀಕರಿಸಿ ಬೇರೆ ಯಾರಿಗಾದರೂ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಆನಂದ್ ಸಿಂಗ್ ಅಸಮಾಧಾನಗೊಂಡಿರುವ ವಿಚಾರ ತಿಳಿದು ಹೊಸಪೇಟೆಯಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ಶಾಸಕ ರಾಜೂಗೌಡ, ಮನವೊಲಿಸುವ ಪ್ರಯತ್ನ ನಡೆಸಿದರು.

ಶಾಸಕನಾಗಿ ಉಳಿಯುತ್ತೇನೆ: ನಾನು ಖಾತೆ ಬದಲಾವಣೆ ಬಗ್ಗೆ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ರಾಜಕೀಯ ವಿಚಾರಗಳ ಬಗ್ಗೆ ನನ್ನ ಕುಟುಂಬ ಸದಸ್ಯರ ಜೊತೆ ಚರ್ಚೆ ನಡೆಸಿರುವುದು ಹೊರತುಪಡಿಸಿ, ಅಸಮಾಧಾನ ವ್ಯಕ್ತಪಡಿಸಿಲ್ಲ. ನಾನು ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡು ಬಂದ ವ್ಯಕ್ತಿಯಲ್ಲ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆ ರಚನೆ ಮಾಡಬೇಕು ಎಂಬುದು ನನ್ನ ಬಯಕೆಯಾಗಿತ್ತು. ನನ್ನ ನಿರೀಕ್ಷೆ, ಮನವಿಯನ್ನು ಮುಖ್ಯಮಂತ್ರಿ ಪುರಸ್ಕರಿಸುತ್ತಾರೆ ಅನ್ನೋ ನಂಬಿಕೆಯಿದೆ. ನನಗೆ ಯಾವ ಖಾತೆಯೂ ಬೇಡ, ಶಾಸಕನಾಗಿ ಉಳಿಯುತ್ತೇನೆ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆಗಳ ಮರು ಹಂಚಿಕೆಯಿಂದ ಉಂಟಾಗಿರುವ ಗೊಂದಲವು ಜ.28ರಿಂದ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ವಿರೋಧ ಪಕ್ಷಗಳಿಗೆ ಸರಕಾರದ ವಿರುದ್ಧ ಟೀಕಾಪ್ರಹಾರಗಳನ್ನು ನಡೆಸಲು ಇದೇ ಪ್ರಮುಖ ಆಸ್ತ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಸಂಪುಟದ ಹಿರಿಯ ಸಚಿವರಿಗೆ, ಅಸಮಾಧಾನಗೊಂಡಿರುವ ಸಚಿವರ ಮನವೊಲಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ನನ್ನ ಮೇಲೆ ಒತ್ತಡ ಹಾಕಬೇಡಿ

‘ಸಚಿವ ಸಂಪುಟದಲ್ಲಿ ಹಿರಿಯನಾಗಿರುವ ತನಗೆ ಈ ರೀತಿ ಪದೇ ಪದೇ ಖಾತೆಗಳನ್ನು ನೀಡಿ, ಬದಲಾಯಿಸುವುದು ಎಷ್ಟರ ಮಟ್ಟಿಗೆ ಸರಿ. ಇವತ್ತು ಸಂಜೆಯೊಳಗಾಗಿ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತೇನೆ. ದಯಮಾಡಿ ಅದನ್ನು ಸ್ವೀಕರಿಸಿ, ನನ್ನ ಮೇಲೆ ಯಾವ ಒತ್ತಡವನ್ನೂ ಹಾಕಬೇಡಿ' ಎಂದು ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿ ಸಮಾಧಾನಪಡಿಸಲು ಯತ್ನಿಸಿದ ಮುಖ್ಯಮಂತ್ರಿಗೆ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ ಎನ್ನಲಾಗಿದೆ.

ಸಚಿವರಿಗೆ ಖಾತೆಗಳ ಹಂಚಿಕೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೂವರು ಸಚಿವರಿಗೆ ಪುನಃ ಖಾತೆಗಳನ್ನು ಹಂಚಿಕೆ ಮಾಡಿ ಸೋಮವಾರ ಆದೇಶ ಹೊರಡಿಸಿದ್ದಾರೆ.

ಜೆ.ಸಿ.ಮಾಧುಸ್ವಾಮಿ-ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಆನಂದ್ ಸಿಂಗ್- ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News