ರಾಜ್ಯದಲ್ಲಿ ಒಟ್ಟು 1.87 ಲಕ್ಷ ಜನರಿಗೆ ಕೋವಿಡ್ ಲಸಿಕೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Update: 2021-01-25 13:58 GMT

ಬೆಂಗಳೂರು, ಜ. 25: ಕೊರೋನ ಸೋಂಕು ನಿಯಂತ್ರಣಕ್ಕೆ ಲಸಿಕೆ ಅಭಿಯಾನದಡಿ, ಈವರೆಗೆ 1,87,211 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ವಿವರ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7,94,500 ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದೆ. ಕೋವ್ಯಾಕ್ಸಿಕ್ ಲಸಿಕೆ ಮೊದಲಿಗೆ 20 ಸಾವಿರ ಡೋಸ್ ಬಂದಿತ್ತು. ನಂತರ ಮತ್ತೆ 1,46,240 ಡೋಸ್ ಬಂದಿದೆ. ಒಟ್ಟು 1,87,211 ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದು ಅತಿಹೆಚ್ಚು ಎಂದು ವಿವರಿಸಿದರು.

ಎರಡನೆ ಹಂತದಲ್ಲಿ ಸಚಿವರಿಗೆ ಲಸಿಕೆ: ಲಸಿಕೆಯಿಂದ ಈವರೆಗೆ ಯಾವುದೇ ದೊಡ್ಡಮಟ್ಟದ ಅಡ್ಡ ಪರಿಣಾಮ ಆಗಿಲ್ಲ. ಇದು ಅತ್ಯಂತ ಸುರಕ್ಷಿತ ಲಸಿಕೆಯಾಗಿದ್ದು, ಹೆಚ್ಚು ಜನರು ಇದನ್ನು ಪಡೆಯಬೇಕು ಎಂದು ಡಾ.ಸುಧಾಕರ್ ಅವರು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದರು.

ಜನರಿಗೆ ನೈತಿಕ ಸ್ಥೈರ್ಯ ತುಂಬಲು ಎರಡನೆ ಹಂತದಲ್ಲಿ ಮುಖ್ಯಮಂತ್ರಿ, ಮಂತ್ರಿಗಳಿಗೆ ಕೋವಿಡ್ ನಿಯಂತ್ರಣ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಸುಮಾರು 500ರಷ್ಟು ಜನಪ್ರಿಯ ವ್ಯಕ್ತಿಗಳಿಗೆ ಲಸಿಕೆ ನೀಡುವಂತೆ ಕ್ರಮ ವಹಿಸಲು ಪ್ರಧಾನಿಗೆ ಕೋರಲಾಗಿದೆ ಎಂದು ಅವರು ತಿಳಿಸಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಬ್ಬರ ಬಳಿ ಇದ್ದರೆ ನಿರ್ವಹಣೆ ಸುಲಭ. ಕೋವಿಡ್ ಲಸಿಕೆ ಬಂದಿರುವ ಈ ಸಮಯದಲ್ಲಿ ಎರಡೂ ಇಲಾಖೆ ಸಮನ್ವಯದಿಂದ ಕೆಲಸ ಮಾಡಬೇಕು. ಯಾರಿಗೇ ಆದರೂ ಕೊಡಲಿ, ಆದರೆ ಒಬ್ಬರಿಗೇ ಖಾತೆ ನೀಡಲಿ. ಕೊರೋನ ತಾರ್ಕಿಕ ಅಂತ್ಯ ಕಾಣಲು ಇದು ಶಾಶ್ವತವಾಗಿ ಒಂದಾಗಬೇಕು. ಮುಂದೆ ಯಾವುದೇ ಸರಕಾರ ಬಂದರೂ ಹೀಗೆಯೇ ಇರಬೇಕು ಎಂದು ಸುಧಾಕರ್ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಠಿಣ ಸವಾಲಿದೆ. ಲಭ್ಯವಿರುವ ಖಾತೆಯನ್ನು ಹಂಚುವುದು ಸಾಹಸದ ಕೆಲಸ. ಈಗ ನಮ್ಮ ಮುಂದೆ ಅತಿಹೆಚ್ಚು ಜನರಿಗೆ ಲಸಿಕೆ ನೀಡುವ ಸವಾಲಿದೆ ಎಂದ ಅವರು, ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News