ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೋಹತ್ಯೆ ನಿಷೇಧ ಜಾರಿ: ಮೇಯರ್ ಘೋಷಣೆ

Update: 2021-01-25 14:47 GMT

ಶಿವಮೊಗ್ಗ,ಜ.25: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರುವ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.

ಸೋಮವಾರ ಮಹಾನಗರಪಾಲಿಕೆ ಮೇಯರ್ ಸುವರ್ಣ ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವುದಾಗಿ ಮೇಯರ್ ಸುವರ್ಣ ಶಂಕರ್ ಘೋಷಿಸಿದರು.

ಇದಕ್ಕೆ ವಿಪಕ್ಷ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದಲ್ಲೇ ಅತಿ ಹೆಚ್ಚು ಗೋಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಮೊದಲು ಅದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ಈ ಬಗ್ಗೆ ಕೆಲ ಕಾಲ ವಾಗ್ವಾದ ನಡೆಯಿತು. ಈ ನಡುವೆ ಆರೆಸ್ಸೆಸ್ ಪದ ಬಳಸಿದ್ದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸಭೆಯಲ್ಲಿ ಏನೇ ವಾಗ್ವಾದ ನಡೆದರೂ ಮೇಯರ್, ಸರ್ಕಾರ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡುವುದಾಗಿ ಘೋಷಿಸಿದರು.

ನಗರ ವ್ಯಾಪ್ತಿಯಲ್ಲಿ ಗೋಹತ್ಯೆ ಮಾಡುವವರ ವಿರುದ್ಧ ಕಾಯ್ದೆಯಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ದೇಶದಲ್ಲೇ ಮೊದಲ ಬಾರಿಗೆ ಗೋ ಸಂರಕ್ಷಣೆಗಾಗಿ ಶಿವಮೊಗ್ಗ ಪಾಲಿಕೆ 50 ಲಕ್ಷ ಅನುದಾನ ತೆಗೆದಿರಿಸಿದೆ. ಜಿಲ್ಲಾಡಳಿತ ಕೂಡ ಚೆಟ್ನಳ್ಳಿಯಲ್ಲಿ ಸರ್ವೇ ನಂ.76ರಲ್ಲಿ 5 ಎಕರೆ ಜಾಗವನ್ನು ಗೋ ಸಂರಕ್ಷಣೆಗಾಗಿ ಮೀಸಲಿಟ್ಟಿದ್ದು, ಪಾಲಿಕೆಯಿಂದ ಅಲ್ಲಿ ಗೋ ಸಂರಕ್ಷಣೆಯ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಇನ್ನು ಮುಂದೆ ಪಾಲಿಕೆಯ ವ್ಯಾಪ್ತಿಯಲ್ಲಿ ಒಂದೇ ಒಂದು ಗೋಹತ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಸಭೆಯ ಆರಂಭದಲ್ಲಿ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ವಿರೋಧ ಪಕ್ಷದ ಸದಸ್ಯ ರಮೇಶ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವೆಡೆ ಇನ್ನೂ ಯುಜಿಡಿ ಮತ್ತು ಯುಜಿ ಕೇಬಲ್ ಟೆಂಡರ್ ಆಗಿಲ್ಲ ಎಂಬ ಮಾಹಿತಿ ಬಂದಿದೆ. ಯಾವುದೇ ಕಾಮಗಾರಿ ನಡೆಸುವಾಗಲೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಥಳೀಯ ಸದಸ್ಯರ ಗಮನಕ್ಕೆ ತರುತ್ತಿಲ್ಲ. ಸಾರ್ವಜನಿಕರ ಎದುರಿಗೆ ವಾರ್ಡ್ ಸದಸ್ಯರು ತಲೆ ತಗ್ಗಿಸುವಂತಾಗಿದೆ. ನಗರವೆಲ್ಲ ಧೂಳು ಮಯವಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಕೊರೋನ ಇಲ್ಲದಿದ್ದರೂ ಧೂಳಿನಿಂದ ಬರುವ ಕಾಯಿಲೆಯ ಭಯದಿಂದ ಮಾಸ್ಕ್ ಹಾಕುವ ಅನಿವಾರ್ಯತೆಯಿದೆ. ನಗರ ನೀರು ಸರಬರಾಜು ಮಂಡಳಿ, ಮೆಸ್ಕಾಂ, ಯುಜಿ ಕೇಬಲ್, ದೂರ ವಾಣಿ ಕೇಬಲ್ ಹಾಕಲು ಕಾಂಕ್ರೀಟ್ ರಸ್ತೆಗಳನ್ನು ಅಗೆಯಲಾಗುತ್ತಿದೆ. ಯಾವುದೇ ಅಧಿಕಾರಿಗಳಿಗೆ ಪರಸ್ಪರ ಸಂಪರ್ಕ ಇಲ್ಲದ್ದರಿಂದ ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿಯೊಳಗೆ ಕಾಮಗಾರಿ ಮುಗಿಸದಿದ್ದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ದಂಡ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಆಗುತ್ತಿದೆ. ನಗರ ಧೂಳಿನ ನಗರವಾಗಿ ಪರಿವರ್ತನೆಯಾಗಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿಲ್ಲ. ಕಾಮಗಾರಿ ಕಳಪೆ ಗುಣಮಟ್ಟದಾಗಿದೆ. ಸ್ಮಾರ್ಟ್ ಸಿಟಿ 500 ಕೋಟಿ ವಾಪಾಸು ಹೋಗಿದ್ದು, ನಿಗದಿತ ಅವಧಿಯೊಳಗೆ ಕೆಲಸ ಮಾಡುವಂತೆ ಕ್ರಮಕೈಗೊಳ್ಳಿ ಎಂದರು.

ಸದಸ್ಯ ನಾಗರಾಜ್ ಕಂಕಾರಿ ಅವರು ಮಾತನಾಡಿ, ಸ್ಮಾರ್ಟ್‌ಸಿಟಿ  ಕಾಮಗಾರಿಗಳು ನಮ್ಮ ವಾರ್ಡ್ ಗಳಲ್ಲಿ ನಡೆದರೂ ಮಾಹಿತಿಯೇ ಇಲ್ಲ. ಅವರಿಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು. ಆಡಳಿತ ಪಕ್ಷದ ನಾಯಕ ಚೆನ್ನಬಸಪ್ಪ ಮಾತನಾಡಿ, ನಾವು ಅನೇಕ ಸಂಕಷ್ಟಗಳ ನಡುವೆಯೂ ಸಾಕಷ್ಟು ಅನುದಾನ ತಂದು ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಜನ ಸಂದಣಿ ಇರುವ ಜಾಗದಲ್ಲಿ ಕಾಮಗಾರಿ ಮಾಡುವಾಗ ಕೆಲವೊಂದು ವ್ಯತ್ಯಾಸವಾಗುತ್ತದೆ. ನಾವೇನು ಮಾಯಾದಂಡವನ್ನು ಹೊಂದಿಲ್ಲ ಎಂದರು.

ಸಭೆ ಮಧ್ಯಾಹ್ನದ ನಂತರವೂ ಮುಂದುವರಿಯಿತು. ಉಪಮೇಯರ್ ಸುರೇಖಾ ಮುರಳಿಧರ್, ಆಯುಕ್ತ ಚಿದಾನಂದ ವಠಾರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News