ಇ-ಎಪಿಕ್ ಕಾರ್ಡ್ ಮತದಾನಕ್ಕೆ ಮಾತ್ರ ಸೀಮಿತ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ ಕುಮಾರ್

Update: 2021-01-25 14:51 GMT

ಬೆಂಗಳೂರು, ಜ.25: ಚುನಾವಣಾ ಆಯೋಗದ ಇ-ಎಪಿಕ್ (ಡಿಜಿಟಲ್ ಗುರುತಿನ ಚೀಟಿ) ಕಾರ್ಡ್ ಮತದಾನಕ್ಕೆ ಮಾತ್ರ ಸೀಮಿತವಾಗಿದ್ದು, ಇತರೆ ಕಾರಣಗಳಿಗೆ ಉಪಯೋಗಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಡಾ. ಸಂಜೀವ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಭಾರತ ಚುನಾವಣಾ ಆಯೋಗದ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ 'ರಾಷ್ಟ್ರೀಯ ಮತದಾರರ ದಿನಾಚರಣೆ-2021' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇ-ಎಪಿಕ್ ಚೀಟಿ ಮತದಾನಕ್ಕೆ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಅಧಿಕೃತ ದಾಖಲೆಯಲ್ಲವೆಂಬುದು ಈಗಾಗಲೇ ದೃಢಪಡಿಸಲಾಗಿದೆ. ಆದರೂ ಕೆಲವೆಡೆ ಈ ಕಾರ್ಡನ್ನು ಮಾನ್ಯ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಮತದಾನ ಜನರ ಮೂಲಭೂತ ಹಕ್ಕಾಗಿದ್ದು, ಪ್ರಜೆಗಳಿಂದ ಆಯ್ಕೆಯಾದ ಸರಕಾರ ಜನರ ಆಶೋತ್ತರಗಳಿಗೆ ತಕ್ಕಂತೆಯೇ ನಡೆಯಬೇಕೆಂಬುದು ಸಂವಿಧಾನದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಮತದಾನದ ಮಹತ್ವ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಸಶಕ್ತ, ಜಾಗರೂಕ, ಸುರಕ್ಷಿತ ಮತ್ತು ಮಾಹಿತಿಯುಳ್ಳ ಮತದಾರ ಈ ವರ್ಷದ ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ ಎಂದು ಅವರು ತಿಳಿಸಿದ್ದಾರೆ.

18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಚುನಾವಣಾ ಆಯೋಗದ ಗುರಿಯಾಗಿದೆ. ಅದಕ್ಕಾಗಿ ಹಲವು ಹೊಸ ಕಾರ್ಯಕ್ರಮಗಳನ್ನು ರೂಪಿಸಿ ಹೆಚ್ಚು ಮಂದಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಮಾತನಾಡಿ, ಚುನಾವಣಾ ಫಲಿತಾಂಶ ಹೊರಬಿದ್ದಾದ ಮೇಲೆ ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಬಗ್ಗೆ ಟೀಕಿಸುವುದು ಸರಿಯಲ್ಲ. ಭಾರತದಲ್ಲಿ 1982ರಿಂದಲೂ ಇವಿಎಂ ಬಳಕೆ ಮಾಡಲಾಗುತ್ತದೆ. ಆದರೂ, ಆ ಬಗ್ಗೆ ಊಹಾಪೋಹಗಳನ್ನು ಹರಿಬಿಡಲಾಗುತ್ತಿದೆ. ಹೀಗಾಗಿ ಇವಿಎಂ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದ್ದಾರೆ.

ವಲಸೆ ಕಾರ್ಮಿಕರು ಎಲ್ಲೇ ಇದ್ದರೂ ಮತ ಚಲಾಯಿಸುವ ಹಕ್ಕು ನೀಡಬೇಕು. ಈ ನಿಟ್ಟಿನಲ್ಲಿ ಕಾನೂನು ಬದಲಾವಣೆ ಮಾಡುವ ಮೂಲಕ ಹೊಸ ವ್ಯವಸ್ಥೆ ರೂಪಿಸಬೇಕು. ಅರ್ಹತೆ ಹೊಂದಿರುವ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಬೇಕಿದೆ ಎಂದು ಅವರು ಆಶಿಸಿದ್ದಾರೆ.

ಈ ವೇಳೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಳೆದ ಚುನಾವಣೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮತದಾರರ ನೋಂದಣಾಧಿಕಾರಿಗಳಿಗೆ, ಸಹಾಯಕ ನೋಂದಣಾಧಿಕಾರಿ, ತಹಶಿಲ್ದಾರರುಗಳಿಗೆ ಮತ್ತು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ರಾಜ್ಯ ಮಟ್ಟದ ಸ್ಪರ್ಧೆ ವಿಜೇತರು ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಮತದಾರರ ಸಾಕ್ಷರತಾ ಸಂಘಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಹೊಸ ಮತದಾರರಿಗೆ, ವಿಕಲ ಚೇತನರಿಗೆ ಹಾಗೂ ಇತರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.

ಚುನಾವಣಾ ಆಯೋಗವು ಇ-ಎಪಿಕ್ ಕಾರ್ಡ್‍ಗಳನ್ನು ಇಂದು ಬಿಡುಗಡೆ ಮಾಡಿದ್ದು, ಇ-ಎಪಿಕ್ ಎಂಬುದು ಸುರಕ್ಷಿತ ಪೋರ್ಟೆಬಲ್ ಡಾಕ್ಯುಮೆಂಟ್ ಫಾಮ್ರ್ಯಾಟ್(ಪಿಡಿಎಫ್) ಆವೃತ್ತಿಯಾಗಿದೆ. ಇದನ್ನು ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಡೌನ್‍ಲೋಡ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು. ಈಗಿನ ಮಾಹಿತಿ ಪ್ರಕಾರ ಎರಡು ಹಂತಗಳಲ್ಲಿ ಇ-ಎಪಿಕ್ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ. ಇ-ಎಪಿಕ್‍ನ್ನು ವೋಟರ್ ಹೆಲ್ಪ್ ಲೈನ್ ಮೊಬೈಲ್ ಆಪ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಅಥವಾ https://eci.gov.in ನಲ್ಲಿಯೂ ಪಡೆದುಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News