ಬೆಂಗಳೂರಿನ ಪ್ರತಿಭಟನೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್ ಗಳನ್ನು ತಡೆದ ಪೊಲೀಸರು: ರೈತರು- ಪೊಲೀಸರ ನಡುವೆ ವಾಗ್ವಾದ

Update: 2021-01-25 16:38 GMT

ಮೈಸೂರು,ಜ.25: ಕೃಷಿ ಕಾಯ್ದೆ ವಿರೋಧಿಸಿ ನಾಳೆ ಬೆಂಗಳೂರಿನಲ್ಲಿ ನಡೆಯುವ ಟ್ರ್ಯಾಕ್ಟರ್ ರ್‍ಯಾಲಿಗೆ ತೆರಳಲು ನಗರದ ಮಹರಾಜ ಕಾಲೇಜು ಮೈದಾನದಲ್ಲಿ ಜಮಾವಣೆಗೊಳ್ಳಲು ಆಗಮಿಸಿದ ರೈತರನ್ನು ಪೊಲೀಸರು ತಡೆದ ಪರಿಣಾಮ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದ ಘಟನೆ ಮೈಸೂರಿನಲ್ಲಿ ನಡೆಯಿತು.

ಮೈಸೂರು ಜಿಲ್ಲೆಯ ಹಲವು ತಾಲೂಕುಗಳಿಂದ ಟ್ರ್ಯಾಕ್ಟರ್ ಗಳಲ್ಲಿ ಮೈಸೂರು ನಗರಕ್ಕೆ ಆಗಮಿಸಲು ಮುಂದಾದ ರೈತರ ಟ್ರ್ಯಾಕ್ಟರ್ ಗಳನ್ನು ಆಯಾ ತಾಲೂಕುಗಳಲ್ಲಿಯೇ ಪೊಲೀಸರು ತಡೆದು ವಶಕ್ಕೆ ಪಡೆದರು.

ಸೋಮವಾರ ಟ್ರ್ಯಾಕ್ಟರ್ ಗಳಲ್ಲಿ ಬೆಂಗಳೂರಿಗೆ ತೆರಳಲು ಮಹಾರಾಜ ಕಾಲೇಜು ಮೈದಾನದಲ್ಲಿ ಜಮಾವಣೆಗೊಳ್ಳಲು ಆಗಮಿಸಿದ ರೈತರನ್ನು ಪೊಲೀಸರು ತಡೆದು ಮಹಾರಾಜ ಕಾಲೇಜು ಮೈದಾನದೊಳಗೆ ಬಿಡದೆ ಗೇಟ್ ಬಂದ್ ಮಾಡಿದರು. ಇದರಿಂದ ಕೋಪಗೊಂಡ ರೈತರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಇದೇ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ. ಇದಕ್ಕೆಲ್ಲಾ ನಾವು ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿಗೆ ತೆರಳಲು ಟ್ರ್ಯಾಕ್ಟರ್ ನಲ್ಲಿ ಆಗಮಿಸಿದ್ದ ರೈತ ಮಹಿಳೆ ಟ್ರ್ಯಾಕ್ಟರ್ ಓಡಿಸಲು ಮುಂದಾಗುತ್ತಿದ್ದಂತೆ ಪೊಲೀಸರು ಆಕೆಯನ್ನು ಹಿಡಿದು ಎಳೆದಾಡಿದರು ಎನ್ನಲಾಗಿದ್ದು, ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ನಂತರ ಸ್ಥಳಕ್ಕಾಗಮಿಸಿದ ಡಿಸಿಪಿ ಪ್ರಕಾಶ್ ಗೌಡ, ದಯವಿಟ್ಟು ಟ್ರ್ಯಾಕ್ಟರ್ ನಲ್ಲಿ ತೆರಳಬೇಡಿ, ಬೆಂಗಳೂರಿನಲ್ಲಿ ಕೇವಲ 50 ಟ್ರ್ಯಾಕ್ಟರ್ ಗಳಿಗೆ ಅನುಮತಿ ನೀಡಲಾಗಿದೆ. ನೀವು ಹೋಗಲು ನಾವು ಬಸ್‍ಗಳನ್ನು ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳಿ ಮೂರು ಬಸ್‍ಗಳ ವ್ಯವಸ್ಥೆ ಮಾಡಿದರು. ನಂತರ ರೈತರು ಮೂರು ಬಸ್‍ಗಳಲ್ಲಿಯೇ ಬೆಂಗಳೂರಿಗೆ ತೆರಳಿದರು. ರೈತರೊಂದಿಗೆ ಕಾರ್ಮಿಕ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿಯವರು ಕೈಜೋಡಿಸಿ ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತರ ಮುಖಂಡರುಗಳಾದ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಶಿರಮಳ್ಳಿ ಸಿದ್ದಪ್ಪ, ಪುನೀತ್, ಹೆಜ್ಜಿಗೆ ಪ್ರಕಾಶ್ ಸೇರಿದಂತೆ ಹವಲರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News