ಅವಧಿ ಮುಗಿದ ಮಾತ್ರೆಗಳನ್ನು ವಿತರಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ: ಆರೋಪ

Update: 2021-01-25 17:55 GMT

ಕಲಬುರಗಿ, ಜ.25: ಆನೆ ಕಾಲು ರೋಗ ನಿವಾರಣೆಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಮಾತ್ರೆ ನುಂಗಿಸುವ ಕಾರ್ಯಕ್ರಮ ಆಯೋಜಿಸಿದ್ದು, ಇದರ ಅಂಗವಾಗಿ ಜಿಲ್ಲಾದ್ಯಂತ ಅಂಗನವಾಡಿ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಮಾತ್ರೆಗಳು ವಿತರಣೆ ಕಾರ್ಯ ನಡೆಯುತ್ತಿದೆ. ಆದರೆ ಇಂದು ಅಂಗನವಾಡಿ ಕಾರ್ಯಕರ್ತರು ಅವಧಿ ಮುಗಿದಿರುವ ಮಾತ್ರೆಗಳನ್ನು ವಿತರಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಇಲ್ಲಿನ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 13ರ ಉಮರ್ ಕಾಲೋನಿಯ 2ನೇ ಕ್ರಾಸ್ ನ ಬಡಾವಣೆಯಲ್ಲಿ ಸಿಬ್ಬಂದಿ ಅವಧಿ ಮುಗಿದಿರುವ ಈ ಮಾತ್ರೆಗಳನ್ನು ವಿತರಿಸಿ ತೆರಳಿದ್ದಾರೆ ಎನ್ನಲಾಗಿದೆ. ಆನೆ ಕಾಲು ರೋಗ ನಿವಾರಣೆಗಾಗಿ ನೀಡಿದ ಮಾತ್ರೆಯು ಫೆ.2018 ರಂದು ತಯಾರಿಸಿದ್ದು, ಜನವರಿ 2021ರಲ್ಲಿ ಅವಧಿ ಮುಗಿಯಲಿದೆ. 

ಈ ಕುರಿತು ಖದೀರ್ ಅಲಿ ಎಂಬವರು ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಾತ್ರೆ ಪಡೆದಿರುವವರು ಮತ್ತೊಮ್ಮೆ ಪರಿಶೀಲಿಸಿ ಮಾತ್ರೆ ಸೇವಿಸಿ ಎಂದು ವಿನಂತಿಸಿದ್ದಾರೆ. 

ದಿನಾಂಕ ಮುಕ್ತಾಯಗೊಂಡ ಮಾತ್ರೆಗಳು ವಿತರಿಸುತ್ತಿರುವ ವಿಷಯ ಬೆಳಕಿಗೆ ಬಂದಿದ್ದು, ಇದು ಒಂದು ಅಪಾಯಕಾರಿ ವಿಷಯವಾಗಿದೆ. ಈ ರೀತಿಯ ನಿರ್ಲಕ್ಷ್ಯ ವಹಿಸಿದ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮಕೈಗೊಂಡು, ನಗರದ ಅಂಗನವಾಡಿ ಕೇಂದ್ರಗಳಿಂದ ಔಷಧಿ ವಿತರಣೆ ಕಾರ್ಯ ನಿಲ್ಲಿಸಿ. ಇಲ್ಲದಿದ್ದರೆ ಭವಿಷ್ಯದಲ್ಲಿ ಹಲವು ಜನರು ಅನಗತ್ಯ ವೈದ್ಯಕೀಯ ಸಮಸ್ಯೆಗಳಿಗೆ ಒಳಗಾಗುವ ಭೀತಿ ಎದುರಿಸಬೇಕಾಗುತ್ತದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ರಿಯಾಜ್ ಖತೀಬ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ರಾಜಶೇಖರ ಮಾಲಿ ಪ್ರತಿಕ್ರಿಯಿಸಿದ್ದು, ಮಾತ್ರೆಗಳ ಅವಧಿ ಜನವರಿ 31ರಂದು ಮುಗಿಯಲಿದೆ. ಇದೇ ಮಾತ್ರೆಗಳನ್ನು ಇಲಾಖೆಯ ಜ.25ರವರೆಗೆ ವಿತರಿಸಲು ಆದೇಶ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News