ರೈತಕ್ರಾಂತಿಯ ಹಾದಿ ತಪ್ಪಿಸುವ ಹುನ್ನಾರಗಳಿಗೆ ಮಣಿಯಬೇಡಿ: ಮಾಜಿ ಸಿಎಂ ಕುಮಾರಸ್ವಾಮಿ

Update: 2021-01-25 18:18 GMT

ಬೆಂಗಳೂರು, ಜ. 25: ‘ಸಂಕಷ್ಟಕ್ಕೆ ಸಿಲುಕಿದ ರೈತರ ಕ್ರಾಂತಿಯ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ. ರೈತಕ್ರಾಂತಿಯನ್ನು ಹಾದಿ ತಪ್ಪಿಸುವ ಹುನ್ನಾರಗಳಿಗೆ ಮಣಿಯದಿದ್ದರೆ ನೈಜ ಕಳಕಳಿಯ ಹೋರಾಟ ತಾರ್ಕಿಕ ಅಂತ್ಯ ಕಂಡು ಗೆಲವು ಆಗುತ್ತದೆ ಎಂಬುದು ಪ್ರಾಮಾಣಿಕ ಅನಿಸಿಕೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಹೊರಟಿರುವ ಕೃಷಿ ಕಾಯ್ದೆಗಳನ್ನು ಪುನರ್ ಪರಿಶೀಲನೆ ನಡೆಸಬೇಕು. ಕೇಂದ್ರ ಸರಕಾರ ಹಠಮಾರಿ ಧೋರಣೆ ಕೈಬಿಟ್ಟು ರೈತರಿಗೆ ಕಾಯ್ದೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿಯನ್ನು ತೋರಬೇಕು ಎಂದು ಆಗ್ರಹಿಸಿದರು.

‘ರೈತರ ಸಮಸ್ಯೆಗಳ ಪರಿಹಾರಕ್ಕೆ ನಡೆಯುವ ಹೋರಾಟಕ್ಕೆ ಜೆಡಿಎಸ್ ಸದಾ ಬೆಂಬಲ ನೀಡುತ್ತಿದೆ. ರೈತರ ಅಭ್ಯುದಯಕ್ಕಾಗಿ ದುಡಿದ ಮತ್ತು ದುಡಿಯುವ ಏಕೈಕ ಪಕ್ಷವೆಂದರೆ ಅದು ಜೆಡಿಎಸ್, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ರಾಜ್ಯದಲ್ಲಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದರೆ ಅದಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ.

ರೈತರ ಶಾಂತಿಯುತ ಪ್ರತಿಭಟನೆಗೆ ರಾಜ್ಯ ಸರಕಾರ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ರೈತ ಕ್ರಾಂತಿಯ ಹೋರಾಟದ ಕಿಚ್ಚಿಗೆ ಕೆಲವು ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಅದಕ್ಕೆ ರೈತರು ಬಲಿಯಾಗಬಾರದು ಎಂಬುದು ನನ್ನ ಕಿವಿಮಾತು' ಎಂದು ಕುಮಾರಸ್ವಾಮಿ, ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News