ಪರಿಸರ ರಕ್ಷಣಾ ಚಳವಳಿಗೆ ಮತ್ತೆ ಸೇರ್ಪಡೆಗೊಂಡ ಅಮೆರಿಕ

Update: 2021-01-25 18:44 GMT

ಆ್ಯಮ್‌ಸ್ಟರ್‌ಡಾಮ್ (ನೆದರ್‌ಲ್ಯಾಂಡ್ಸ್), ಜ. 25: ಜಾಗತಿಕ ತಾಪಮಾನದ ಪರಿಣಾಮಗಳಿಂದ ಜನರು ಮತ್ತು ಆರ್ಥಿಕತೆಗಳನ್ನು ರಕ್ಷಿಸುವ ವಿಧಾನಗಳ ಬಗ್ಗೆ ಸೋಮವಾರ ನಡೆಯುವ ಉನ್ನತ ಮಟ್ಟದ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ಅಮೆರಿಕವು ಹವಾಮಾನ ಬದಲಾವಣೆ ವಿರುದ್ಧದ ಜಾಗತಿಕ ಹೋರಾಟಕ್ಕೆ ಮರಳಲಿದೆ.

ಅವೆುರಿಕ ಅಧ್ಯಕ್ಷ ಜೋ ಬೈಡನ್‌ರ ವಿಶೇಷ ಪರಿಸರ ರಾಯಭಾರಿ ಜಾನ್ ಕೆರಿ ನೆದರ್‌ಲ್ಯಾಂಡ್ಸ್ ರಾಜಧಾನಿ ಆ್ಯಮ್‌ಸ್ಟರ್‌ಡಾಮ್‌ನಲ್ಲಿ ನಡೆಯಲಿರುವ ಪರಿಸರ ಹೊಂದಾಣಿಕೆ ಸಮ್ಮೇಳನ (ಕ್ಲೈಮೇಟ್ ಅಡಾಪ್ಟೇಶನ್ ಸಮಿಟ್)ದಲ್ಲಿ ಭಾಗವಹಿಸಲಿದ್ದಾರೆ.

ಚೀನಾದ ಉಪ ಪ್ರಧಾನಿ ಜಾನ್ ಝೆಂಗ್, ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್, ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್ ಹಾಗೂ ಇತರ ನಾಯಕರೂ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.

ನೆದರ್‌ಲ್ಯಾಂಡ್ಸ್‌ನ ಆತಿಥ್ಯದಲ್ಲಿ ನಡೆಯುವ ಆನ್‌ಲೈನ್ ಸಮ್ಮೇಳನವು 2030ರವರೆಗಿನ ಅವಧಿಯಲ್ಲಿ ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಪ್ರಾಯೋಗಿಕ ಪರಿಹಾರಗಳ ಬಗ್ಗೆ ಚರ್ಚಿಸಲಿದೆ.

ವಿಜ್ಞಾನಿಗಳ ಒತ್ತಾಯ

ಸಮ್ಮೇಳನ ಆರಂಭಕ್ಕೂ ಮುನ್ನ, ಜಾಗತಿಕ ತಾಪಮಾನದ ದುಷ್ಪರಿಣಾಮಗಳಿಂದ ಜನರನ್ನು ರಕ್ಷಿಸುವಂತೆ ಜಗತ್ತಿನಾದ್ಯಂತದ 3,000ಕ್ಕೂ ಅಧಿಕ ವಿಜ್ಞಾನಿಗಳು ಜಾಗತಿಕ ನಾಯಕರನ್ನು ಒತ್ತಾಯಿಸಿದ್ದಾರೆ.

‘‘ವೇಗವಾಗಿ ಬಿಸಿಯಾಗುತ್ತಿರುವ ನಮ್ಮ ಜಗತ್ತು ಈಗಾಗಲೇ ಭಾರೀ ಪ್ರಮಾಣದ ವಿಪತ್ತುಗಳನ್ನು ಎದುರಿಸುತ್ತಿದೆ. ತೀವ್ರ ಬರಗಾಲ, ಕಾಡ್ಗಿಚ್ಚು, ಉಷ್ಣ ಅಲೆಗಳು, ಪ್ರವಾಹ ಮತ್ತು ವಿನಾಶಕಾರಿ ಚಂಡಮಾರುತಗಳು ಹಾಗೂ ಇತರ ವಿಚ್ಛಿದ್ರಕಾರಿ ಚುಟುವಟಿಕೆಗಳು ಹವಾಮಾನ ಬದಲಾವಣೆಯ ಫಲಿತಾಂಶವಾಗಿದೆ’’ ಎಂದು ಐವರು ನೊಬೆಲ್ ಪ್ರಶಸ್ತಿ ವಿಜೇತರೂ ಸೇರಿದಂತೆ ವಿಜ್ಞಾನಿಗಳು ಹೇಳಿಕೆಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘‘ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಹವಾಮಾನ ಬದಲಾವಣೆಯ ಪರಿಣಾಮಗಳು ಬಡತನ, ನೀರಿನ ಕೊರತೆ ಮತ್ತು ಕೃಷಿ ವೈಫಲ್ಯ ಪ್ರಮಾಣಗಳನ್ನು ಹಿಗ್ಗಿಸುತ್ತವೆ. ಇವುಗಳು ಜನರ ಮೇಲೆ ಅತಿ ಕೆಟ್ಟ ಪರಿಣಾಮವನ್ನು ಬೀರಲಿದ್ದು, ಜನರು ವಲಸೆ ಹೋಗುವ ಸಂದರ್ಭ ಬರಬಹುದಾಗಿದೆ’’ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News