ರ‍್ಯಾಲಿ ಮಾರ್ಗ ಉಲ್ಲಂಘನೆ ಅನಿವಾರ್ಯ : ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ

Update: 2021-01-26 03:39 GMT

ಹೊಸದಿಲ್ಲಿ : ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿರುವ ದೆಹಲಿಯ ಐತಿಹಾಸಿಕ ಟ್ರ್ಯಾಕ್ಟರ್ ರ್ಯಾಲಿಗೆ ರೈತರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ರೈತರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕವಾಗಿರುವ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಪೊಲೀಸರು ಈಗಾಗಲೇ ಒಪ್ಪಿಕೊಂಡ ರ‍್ಯಾಲಿ ಪಥವನ್ನು ಉಲ್ಲಂಘಿಸುವುದು ಅನಿವಾರ್ಯ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಘೋಷಿಸಿದೆ.

ರೈತರ ಟ್ರ್ಯಾಕ್ಟರ್ ಪರೇಡ್‌ ದೆಹಲಿಯ ರಸ್ತೆಯನ್ನು ತಲುಪಿಲಿದೆ ಎಂದು ಸಂಘಟನೆ ಹೇಳಿದ್ದು, ಮಾರ್ಗ ಉಲ್ಲಂಘನೆ ಕಾರಣದಿಂದ ಪೊಲೀಸರ ಜತೆ ಸಂಘರ್ಷ ಏರ್ಪಡುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ. ರೈತ ಸಂಘಟನೆಗಳ ಮುಖಂಡರ ಜತೆ ಕುಳಿತು ಪೊಲೀಸ್ ಇಲಾಖೆ ಗಡಿಯ ಮೂರು ಕಡೆಗಳಲ್ಲಿ ಈಗಾಗಲೇ ರ‍್ಯಾಲಿ ಮಾರ್ಗವನ್ನು ಅಂತಿಮಪಡಿಸಿದ್ದು, ಬಿಗಿ ಬಂದೋಬಸ್ತ್ ಮಾಡಿಕೊಂಡಿದೆ. ಗಣರಾಜ್ಯೋತ್ಸವದಂದು ರ್ಯಾಲಿ ನಡೆಸಿದ ಬಳಿಕ ಫೆಬ್ರುವರಿ 1ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗುವ ದಿನ ರೈತರು ಸಂಸತ್ತಿಗೆ ಜಾಥಾ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಈ ಮಧ್ಯೆ ದೆಹಲಿ ಪೊಲೀಸ್ ಮುಖ್ಯಸ್ಥ ಎಸ್.ಎನ್.ಶ್ರೀವಾಸ್ತವ ಹೇಳಿಕೆ ನೀಡಿ, ರೈತರ ಪ್ರತಿಭಟನೆಗೆ ಕೆಲ ದೇಶವಿರೋಧಿ ಶಕ್ತಿಗಳು ಕುಮ್ಮಕ್ಕು ನೀಡುತ್ತಿವೆ ಎಂದು ಹೇಳಿದ್ದಾರೆ. ರಾಜಪಥದಲ್ಲಿ ನಡೆಯುವ ಸಶಸ್ತ್ರ ಪಡೆಗಳ ಪರೇಡ್ ಬಳಿಕ 10 ಗಂಟೆಗೆ ಆರಂಭವಾಗುವ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ದೆಹಲಿ ಪೊಲೀಸರು ವಿವರವಾದ ಸಂಚಾರಿ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ 44ನ್ನು ಬಳಸದಂತೆ ಮನವಿ ಮಾಡಿಕೊಂಡಿದ್ದಾರೆ. ಗಾಝಿಪುರ ಗಡಿ ಮತ್ತು ರಾಷ್ಟ್ರೀಯ ಹೆದ್ದಾರಿ 24ನ್ನು ಸಂಪರ್ಕಿಸುವ ರಸ್ತೆ, ರಸ್ತೆ ಸಂಖ್ಯೆ 56 ಹಾಗೂ ಅಪ್ಸರಾ ಗಡಿಯತ್ತ ಬರದಂತೆ ಸಲಹೆ ಮಾಡಿದ್ದಾರೆ.

ಇತರ ಕಡೆಗಳಲ್ಲೂ ಪ್ರತಿಭಟನೆಯ ವಾತಾವರಣ ಕಂಡುಬರುತ್ತಿದ್ದು, ಮೀರಠ್‌ನಲ್ಲಿ ದೆಹಲಿಯತ್ತ ಸಂಚರಿಸುವ ಟ್ರ್ಯಾಕ್ಟರ್‌ಗಳನ್ನು ಪೊಲೀಸರು ತಡೆದು, ಈಗಾಗಲೇ ಸಾಕಷ್ಟು ಮಂದಿ ದೆಹಲಿಯಲ್ಲಿ ಸೇರಿರುವುದರಿಂದ ಅಲ್ಲಿಗೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News