ಶಿವಮೊಗ್ಗದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

Update: 2021-01-26 05:37 GMT

ಶಿವಮೊಗ್ಗ: ಶಿವಮೊಗ್ಗದಲ್ಲಿ ಇಂದು 72ನೇ ವರ್ಷದ ಗಣರಾಜ್ಯೋತ್ಸವವನ್ನು  ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಜಿಲ್ಲಾ ಡಿಎಆರ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ  ಅವರು ಧ್ವಜಾರೋಹಣ ನೆರವೇರಿಸಿದರು. 
ಜಿಲ್ಲಾ ಪೊಲೀಸ್ ವತಿಯಿಂದ ಡಿಎಆರ್ ಮೈದಾನದಲ್ಲಿ ಪಥ ಸಂಚಲನ ನಡೆಯಿತು. ವಿವಿಧ ಪೊಲೀಸ್ ತುಕಡಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು. ಸಚಿವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಸ್ಮರಿಸುವ ಉದ್ದೇಶದಿಂದ ಇವತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಎಲ್ಲೆಡೆ ಕಡ್ಡಾಯವಾಗಿ ನಮನ ಸಲ್ಲಿಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ದೊರಕಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿದೆ. ಈ ವರ್ಷ 119 ಕೋಟಿ ರೂ. ಸಂದಾಯ ಮಾಡಲಾಗಿದೆ. ಭದ್ರಾವತಿಯಲ್ಲಿ ಎಆರ್ ಎಫ್ ಬಟಾಲಿಯನ್ ಸ್ಥಾಪನೆ, ಕೇಂದ್ರಿ ವಿದ್ಯಾಲಯಗಳು, ವಿಮಾನ ನಿಲ್ದಾಣ, ಶಿವಮೊಗ್ಗ ನಗರದಲ್ಲಿ ಹೊರ ವರ್ತುಲ ರಸ್ತೆಗಳು, ಶಿವಮೊಗ್ಗ – ತುಮಕೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ, ಶಿವಮೊಗ್ಗ – ಚಿತ್ರದುರ್ಗ ರಸ್ತೆ, ಸಿಗಂದೂರು ಸೇತುವೆ ಯೋಜನೆಗಳು ಜಿಲ್ಲೆಯಲ್ಲಿ ಅಭಿವೃದ್ಧಿ ವೇಗ ಹೆಚ್ಚಿಸಿದೆ‌ ಎಂದರು.

ಕೈಗಾರಿಕೆಗಳ ಅಭಿವೃದ್ಧಿಗಾಗಿ ಸಾಗರ ರಸ್ತೆಯ ಕೈಗಾರಿಕಾ ವಸಾಹತಿನಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಚುರಕುಗೊಂಡಿದೆ. 217 ಕೋಟಿ ರೂ. ವೆಚ್ಚ ಮಾಡಿ, 42 ಕಾಮಗಾರಿ ಪೂರ್ಣಗೊಂಡಿದೆ ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News