ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-01-26 11:52 GMT

ಬೆಂಗಳೂರು, ಜ.26: ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಿಲ್ಲ. ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ನಗರದೊಳಗೆ ಟ್ರ್ಯಾಕ್ಟರ್ ರ್‍ಯಾಲಿಗೆ ಅವಕಾಶ ನೀಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ರೈತ ಮುಖಂಡರು ತಾವು ಇನ್ನೂ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಅವರು ನಡೆಸುವ ಹೋರಾಟ ಶಾಂತಿಯುತವಾಗಿದ್ದರೆ ನಮ್ಮ ಅಭ್ಯಂತರವಿಲ್ಲ ಎಂದರು.

ಕೆಲವು ರೈತ ಮುಖಂಡರು ಅನಗತ್ಯವಾಗಿ ಸಾಮಾನ್ಯ ರೈತರನ್ನು ಹಾಗೂ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ತಾವು ಯಾತಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂಬುದೇ ಹಲವರಿಗೆ ಗೊತ್ತಿಲ್ಲ. ನನ್ನ ಮನೆಯ ಬಾಗಿಲು ರೈತರಿಗಾಗಿ ಸದಾ ತೆರೆದಿರುತ್ತದೆ. ಅವರು ಯಾವಾಗ ಬೇಕಾದರೂ ಬಂದು ನನ್ನ ಜೊತೆ ಮಾತನಾಡಿ, ಅವರ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.

ಗೆಲ್ಲೋವರೆಗೆ ರೈತ, ಗೆದ್ದಮೇಲೆ ಯಾರಾತ?: ಕಾಂಗ್ರೆಸ್ ಟೀಕೆ

ಹಸಿರು ಟವೆಲ್ ಹಾಕಿ, ರೈತರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರೇ, ಈಗ ಕಾರ್ಪೋರೇಟ್ ಧಣಿಗಳ ಸೇವಕನಾಗಿ ಪ್ರಮಾಣಕ್ಕೆ ಬದ್ಧರಾಗಿರಲು ಮರೆತಿದ್ದೀರಿ. ಟ್ರಾಕ್ಟರ್ ಗಳನ್ನು ತಡೆದು, ಡೀಸೆಲ್ ಹಾಕದಂತೆ ಆದೇಶಿಸಿ, ರೈತರನ್ನ ತಡೆದು ಧೂರ್ತತನ ತೋರಿದ್ದೀರಿ. ಗೆಲ್ಲೋವರೆಗೆ ರೈತ, ಗೆದ್ದಮೇಲೆ ಯಾರಾತ?! ಎನ್ನುವ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News