ರೈತರ ಪ್ರತಿಭಟನೆಗೆ ತಡೆ: ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

Update: 2021-01-26 12:08 GMT

ಬೆಂಗಳೂರು, ಜ.26: ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲು ರೈತರು ರಾಜಧಾನಿಗೆ ಬರದಂತೆ ಪೊಲೀಸರು ತಡೆಯುತ್ತಿರುವುದು ಸರಿಯಲ್ಲ. ರೈತರ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವ ರಾಜ್ಯ ಸರಕಾರ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ಮಂಗಳವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರವು ರೈತರ ಪ್ರತಿಭಟನೆಗೆ ಅವಕಾಶ ನಿರಾಕರಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ನಮ್ಮ ದೇಶದ ಸಂವಿಧಾನ ಪ್ರಜಾಪ್ರಭುತ್ವಕ್ಕೆ ಅವಕಾಶ ಕಲ್ಪಿಸಿದೆಯೇ ಹೊರತು ಸರ್ವಾಧಿಕಾರಕ್ಕಲ್ಲ ಎಂಬುದನ್ನು ಸರಕಾರ ಅರ್ಥ ಮಾಡಿಕೊಳ್ಳಲಿ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟಿಸುವ, ತಮ್ಮ ಮಾತನ್ನು ಆಡಳಿತ ನಡೆಸುವವರ ಎದುರು ಇಡಲು ಅವಕಾಶವಿದೆ. ಆದರೆ, ದೇಶದ ಬೆನ್ನೆಲುಬಾಗಿರುವ ರೈತರ ಹೋರಾಟದ ಹಕ್ಕನ್ನು ಪೊಲೀಸರ ಮೂಲಕ ಕಸಿದುಕೊಳ್ಳುವ ಪ್ರಯತ್ನ ಈ ಸರಕಾರ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೆ ತಕ್ಕ ಉತ್ತರ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ರೈತರು ನಡೆಸುವ ಪ್ರತಿಭಟನೆಯನ್ನು ಸರಕಾರ ಹತ್ತಿಕ್ಕುವುದಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಣೆ ನೀಡಿದ್ದರು. ಆದರೆ, ಇವತ್ತು ಪೊಲೀಸರ ಮೂಲಕ ರೈತರು ಬೆಂಗಳೂರಿನ ಒಳಗೆ ಪ್ರವೇಶ ಪಡೆಯದಂತೆ ತಡೆಯುತ್ತಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News