ಬಿಜೆಪಿ ಸರಕಾರದ ವಿರುದ್ಧ ‘ರೈತ ಗಣರಾಜ್ಯೋತ್ಸವ’ ಅಭಿಯಾನ ನಡೆಸಿದ ಕಾಂಗ್ರೆಸ್

Update: 2021-01-26 12:40 GMT

ಬೆಂಗಳೂರು, ಜ.26: ರೈತಾಪಿ ವರ್ಗವನ್ನು ನಿರ್ಲಕ್ಷಿಸಿ ಯಾವ ದೇಶವೂ ಅಭಿವೃದ್ಧಿಯಾಗುವುದಿಲ್ಲ. ರೈತರನ್ನ ತುಳಿದು ಯಾವ ಸಾಮ್ರಾಜ್ಯವೂ ಉಳಿಯುವುದಿಲ್ಲ. ಕರಾಳ ಕಾಯ್ದೆಯಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಬೆಂಬಲವಿಲ್ಲ. ರೈತ ವಿರೋಧಿ ರಾಜ್ಯ ಬಿಜೆಪಿ, ಕೇಂದ್ರದ ಬಿಜೆಪಿ ಸರಕಾರಗಳಿಗೆ ಬೆಲೆಯೂ ಇಲ್ಲ ಎಂದು ಕಾಂಗ್ರೆಸ್ ‘ರೈತ ಗಣ ರಾಜ್ಯೋತ್ಸವ’ದ ಹೆಸರಿನಲ್ಲಿ ಸರಣಿ ಟ್ವೀಟ್‍ಗಳ ಮೂಲಕ ಟೀಕಿಸಿದೆ.

ಗಣರಾಜ್ಯೋತ್ಸವ ಸಂಭ್ರಮವಲ್ಲ, ಜವಾಬ್ದಾರಿ. ಅದು ದೇಶದ ಪ್ರಜಾತಂತ್ರಕ್ಕೆ ಭದ್ರ ಬುನಾದಿ ಒದಗಿಸಿದ ವಿಶ್ವದ ಶ್ರೇಷ್ಠ ಸಂವಿಧಾನವನ್ನು ಅಳವಡಿಸಿಕೊಂಡ ದಿನ. ಭಾರತದ ಪಾಲಿಗೆ ಸಂವಿಧಾನವೇ ಧರ್ಮ, ಅಲ್ಲಿ ಎಲ್ಲರ ಹಕ್ಕು, ಸ್ವಾತಂತ್ರ್ಯ, ಚಿಂತನೆಗಳಿಗೆ ಗೌರವ ನೀಡಲಾಗಿದೆ. ಸಂವಿಧಾನದ ಆಶಯಗಳ ಪಾಲನೆ, ರಕ್ಷಣೆ ನಮ್ಮ ಜವಾಬ್ದಾರಿ ಎಂದು ಕಾಂಗ್ರೆಸ್ ಹೇಳಿದೆ.

ಇಂದು ಸಂವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಭಾವನಾತ್ಮಕವಾಗಿ ಸ್ವಾತಂತ್ರ್ಯ ಪಡೆದ ದಿನ. ಈ ಪವಿತ್ರ ದಿನ ದೇಶದ ಅನ್ನದಾತ ಸಂವಿಧಾನ ವಿರೋಧಿ ಸರಕಾರ ಹಾಗೂ ಕರಾಳ ಕಾಯ್ದೆಗಳ ವಿರುದ್ಧ ಸಿಡಿದೆದ್ದು ನಿಂತಿದ್ದಾನೆ. ಅನ್ನದಾತನ ಬೆನ್ನಿಗೆ ನಾವೆಲ್ಲರೂ ನಿಲ್ಲೋಣ. ದೇಶ ಉಳಿಸೋಣ ಎಂದು ಕಾಂಗ್ರೆಸ್ ಕರೆ ನೀಡಿದೆ.

ಅದಾನಿ, ಅಂಬಾನಿಗಳ ಸರಕಾರ, ರೈತಾಪಿ ಸಂಸ್ಕೃತಿಗೆ ಸಂಚಕಾರ. ರೈತರನ್ನು ಕಾರ್ಪೋರೇಟ್ ಕಂಪೆನಿಗಳ ಜೀತದಾಳುಗಳನ್ನಾಗಿ ಮಾಡುವುದೇ ಬಿಜೆಪಿಯ ಉದ್ದೇಶ. ಎಪಿಎಂಸಿ ಮುಚ್ಚಿ ರೈತರನ್ನು ಕಾರ್ಪೋರೇಟ್ ಕಂಪೆನಿಗಳ ಜೀತಕ್ಕೀಡುವ ರಾಜ್ಯ ಬಿಜೆಪಿ ಹುನ್ನಾರವನ್ನ ಅದರ ನಾಯಕರೇ ಬಾಯಿ ಬಿಡುತ್ತಿದ್ದಾರೆ, ಸುಳ್ಳುಗಳು ಬಯಲಾಗುತ್ತಿವೆ. ಜಗದೀಶ್ ಶೆಟ್ಟರ್ ಅವರೆ, ಎಪಿಎಂಸಿ ಮುಚ್ಚಿಸಿ ರೈತರನ್ನು ಕಂಪೆನಿಗಳ ಗುಲಾಮರನ್ನಾಗಿಸುವ ನಿಮ್ಮ ಉದ್ದೇಶ ರೈತರಿಗೆ ತಿಳಿದಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿ ನಡೆಸಿ ದೇಶದ ಜನತೆಯ ಪ್ರಶ್ನೆಗೆ ಉತ್ತರಿಸುವುದಿಲ್ಲ. ಹಲವು ದಿನಗಳಿಂದ ರೈತರು ಪ್ರತಿಭಟಿಸುತ್ತಿದ್ದರೂ ರೈತರೊಂದಿಗೆ ಚರ್ಚಿಸುವ ಧೈರ್ಯ ತೋರಲಿಲ್ಲ. ನರೇಂದ್ರಮೋದಿ ಅವರನ್ನ ಉತ್ತರ ಕೊಡಲು ಹಿಂಜರಿಯುವ ಉತ್ತರಕುಮಾರ ಎನ್ನಬಹುದು ಅಲ್ಲವೇ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News