ಕೃಷಿ ಕಾಯ್ದೆಗಳ ವಿರುದ್ಧ ಬೀದಿಗಿಳಿದ ರೈತರು: ಬೆಂಗಳೂರು ಸೇರಿ ರಾಜ್ಯದ ಹಲವೆಡೆ 'ಟ್ರ್ಯಾಕ್ಟರ್ ಪರೇಡ್'

Update: 2021-01-26 15:39 GMT

ಬೆಂಗಳೂರು, ಜ.26: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳು ಮತ್ತು ರಾಜ್ಯ ಸರಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯವಂತೆ ಆಗ್ರಹಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅನ್ನದಾತರು ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸಿ, ಬಿಜೆಪಿ ನೇತೃತ್ವದ ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ, ಕನಿಷ್ಠ ಬೆಂಬಲ ಬೆಲೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರರಾಜಧಾನಿ ಹೊಸದಿಲ್ಲಿಯಲ್ಲಿ ಹೋರಾಟನಿತರ ರೈತರು ಗಣರಾಜ್ಯೋತ್ಸವ ದಿನವೇ ಕರೆ ಕೊಟ್ಟ ಟ್ರ್ಯಾಕ್ಟರ್ ಮೆರವಣಿಗೆ ಬೆಂಬಲಿಸಿ, ಬೆಂಗಳೂರು, ಕಲಬುರ್ಗಿ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧೆಡೆ ನೂರಾರು ರೈತ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮುಖ್ಯವಾಗಿ ಟ್ರ್ಯಾಕ್ಟರ್ ಪರೇಡ್‍ನ ಕೇಂದ್ರ ಬಿಂದುವಾಗಿದ್ದ ಬೆಂಗಳೂರಿಗೆ ಇಲ್ಲಿನ ತುಮಕೂರು ರಸ್ತೆ, ನೈಸ್ ರೋಡ್ ಜಂಕ್ಷನ್, ದೇವನಹಳ್ಳಿ ನಂದಿಕ್ರಾಸ್, ಹೊಸಕೋಟೆ ಟೋಲ್ ಜಂಕ್ಷನ್, ಸುಮನಹಳ್ಳಿ ಗೇಟ್, ಬೆಂಗಳೂರು ನಗರ ರೈಲ್ವೆ ನಿಲ್ದಾಣ ಸೇರಿದಂತೆ 6 ಕಡೆಗಳಿಂದ ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಆಲ್ ಇಂಡಿಯಾ ಡೆಮೊಕ್ರಟಿಕ್ ವುಮೆನ್ಸ್ ಅಸೋಸಿಯೇಷನ್, ಎಐಟಿಯುಸಿ, ಕರ್ನಾಟಕ ಜನಶಕ್ತಿ, ಆಲ್ ಇಂಡಿಯೂ ಡೆಮೊಕ್ರಟಿಕ್ ಸ್ಟೂಡೆಂಟ್ ಅಸೋಸಿಯೇಷನ್, ಐಕ್ಯ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಮಾವೇಶಗೊಂಡ ರೈತರು, ಅಲ್ಲಿಂದ ಫ್ರೀಡಂಪಾರ್ಕ್ ಮೈದಾನದವರೆಗೆ ಪರೇಡ್ ನಡೆಸಿ ಕೇಂದ್ರದ ಕೃಷಿ ಕಾಯ್ದೆಗಳು, ರಾಜ್ಯ ಸರಕಾರದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಭೂಸ್ವಾಧೀನ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ವಾಗ್ವಾದ: ದೂರದ ಜಿಲ್ಲೆಗಳಿಂದ ಪರೇಡ್‍ಗೆ ಬರುವ ರೈತರು ಜೀಪು, ಟೆಂಪೊೀ, ಬಸ್, ವ್ಯಾನ್‍ಗಳಲ್ಲಿ ಆಗಮಿಸಿದರೆ, ಬೆಂಗಳೂರು ಸುತ್ತಮುತ್ತಲಿನ ರೈತರು ಟ್ರ್ಯಾಕ್ಟರ್ ಗಳಲ್ಲಿ ಆಗಮಿಸಿದ್ದರು. ಟ್ರ್ಯಾಕ್ಟರ್ ಗಳನ್ನು ನಗರದ ಒಳಗೆ ಬಿಡುವ ವಿಷಯದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದ ದೃಶ್ಯ ಕಂಡಿತು.

125 ಟ್ರ್ಯಾಕ್ಟರ್ ಗಳಿಗೆ ಅನುಮತಿ: ಟ್ರ್ಯಾಕ್ಟರ್ ಗಳಿಗೆ ಅನುಮತಿ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆಗೆ ರೈತ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 125 ಟ್ರ್ಯಾಕ್ಟರ್ ಗಳನ್ನು ಮಾತ್ರ ನಗರದೊಳಗೆ ಬಿಡಲು ಪೊಲೀಸರು ತೀರ್ಮಾನಿಸಿದರು ಎನ್ನಲಾಗಿದೆ. ಅದರಂತೆ, ಟ್ರ್ಯಾಕ್ಟರ್ ಗಳಿಗೆ ನಂಬರ್ ಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಆಯಾ ಪ್ರದೇಶದಿಂದ ಇಂತಿಷ್ಟು ಟ್ರ್ಯಾಕ್ಟರ್ ಗಳಿಗೆ ನಗರ ಪ್ರವೇಶಿಸಲು ಅನುಮತಿ ಕೊಟ್ಟಿದ್ದು, ಅದರಂತೆ 125 ಟ್ರ್ಯಾಕ್ಟರ್ ಗಳು ಮಾತ್ರ ಪರೇಡ್‍ನಲ್ಲಿದ್ದವು ಎಂದು ರೈತ ಮುಖಂಡರೊಬ್ಬರು ತಿಳಿಸಿದರು.

ಮುಖ್ಯಮಂತ್ರಿ ವಿರುದ್ಧ ಆಕ್ರೋಶ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾವು ರೈತರ ಪರವಾಗಿದ್ದೇವೆ. ಪ್ರತಿಭಟನೆಯನ್ನು ಹತ್ತಿಕ್ಕುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಪೊಲೀಸರ ಮೂಲಕ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಪರೇಡ್‍ನಲ್ಲಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದು ನಮ್ಮ ಬದುಕಿನ ಹೋರಾಟ. ನಮ್ಮ ಬದುಕನ್ನು ನಾಶ ಮಾಡುವಂತಹ ಮಸೂದೆಗಳನ್ನು ಸರಕಾರಗಳು ಜಾರಿಗೊಳಿಸಿವೆ. ಅವರು ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ನಮ್ಮ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಅನ್ನ ನೀಡಿದ ರೈತನಿಗೆ ದ್ರೋಹ ಮಾಡಬೇಡಿ. ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಿ ಎಂದು ರೈತರು ಮನವಿ ಮಾಡಿದರು.

ಗಣತಂತ್ರ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿದೆ. ಅದಕ್ಕಾಗಿ ನಾವು ಗಣರಾಜ್ಯೋತ್ಸವಕ್ಕೆ ಅಡ್ಡಿಪಡಿಸಿಲ್ಲ. ಆ ಕಾರ್ಯಕ್ರಮ ಮುಗಿದ ನಂತರ ಇಲ್ಲಿ ಧ್ವಜಾರೋಹಣ ಮಾಡಿ ನಾವು ಜನಗಣ ಪರೇಡ್ ಮಾಡುವ ಮೂಲಕ ನಮ್ಮ ಸಮಸ್ಯೆಗಳ ಸಂದೇಶವನ್ನು ಜನರಿಗೆ ತಿಳಿಸುತ್ತಿದ್ದೇವೆ ಎಂದು ಪ್ರತಿಭಟನಾ ನಿರತರು ತಿಳಿಸಿದರು.

ರೈತನ ಟ್ರ್ಯಾಕ್ಟರ್ ತಡೆದ ಪೊಲೀಸರು ?

ಟ್ರಾಕ್ಟರ್ ಪರೇಡ್ ಹಿನ್ನೆಲೆಯಲ್ಲಿ ಹೊಸಕೋಟೆ ಟೋಲ್ ಬಳಿ ಆಲೂಗಡ್ಡೆ ತುಂಬಿದ್ದ ಟ್ರ್ಯಾಕ್ಟರ್‍ಅನ್ನು ಪೊಲೀಸರು ತಡೆದು, ವಾಪಸ್ ಕಳುಹಿಸಿದ ಘಟನೆ ವರದಿಯಾಗಿದೆ.

ರೈತ ಮುನಿರಾಮಪ್ಪ ಎಂಬವರು 80 ಮೂಟೆ ಆಲೂಗಡ್ಡೆಯನ್ನು ತೆಗೆದುಕೊಂಡು ಹೋಗುತ್ತಿದ್ದ ಟ್ರಾಕ್ಟರನ್ನು ತಡೆದ ಪೊಲೀಸರು ರೈತರು ಟ್ರ್ಯಾಕ್ಟರ್ ಬಿಡುವಂತೆ ಬೇಡಿಕೊಂಡರೂ, ವಾಪಸ್ ಹೋಗುವಂತೆ ಸೂಚಿಸಿದರು. ಬಳಿಕ ಕೆಲಕಾಲ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.

ಎಲ್ಲೆಡೆ ಪೊಲೀಸ್ ಭದ್ರತೆ

ರೈತರ ಟ್ರ್ಯಾಕ್ಟರ್ ಪರೇಡ್ ಹಿನ್ನೆಲೆ ಮುಖ್ಯಮಂತ್ರಿಗಳ ನಿವಾಸ ಕೃಷ್ಣಾ, ವಿಧಾನಸೌಧ, ಶಾಸಕರ ಭವನ, ರಾಜಭವನ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಇಲ್ಲಿನ ಹೊರವಲಯದ ಟೋಲ್‍ಗೇಟ್ ಬಳಿ ಮಂಗಳವಾರ ಬೆಳಗ್ಗೆಯಿಂದಲೇ ನೂರಾರು ಪೊಲೀಸರನ್ನು ನಿಯೋಜಿಸಿದ್ದು, ರೈತರು ಸಾಗಿ ಬಂದ ರಸ್ತೆಯುದ್ದಕ್ಕೂ ಸಾವಿರಾರು ಪೊಲೀಸರು ಹಾಜರಿದ್ದರು.

ಸಂಚಾರ ದಟ್ಟಣೆ ಇಲ್ಲ..!

ಮಂಗಳವಾರ ಗಣರಾಜ್ಯೋತ್ಸವ ಹಿನ್ನೆಲೆ ಸರಕಾರಿ ರಜೆ ಇತ್ತು. ಹಾಗಾಗಿ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ಬಿಸಿ ಹೆಚ್ಚಾಗಿ ತಟ್ಟಲಿಲ್ಲ. ರೈತರು, ಪೊಲೀಸರು ಸೂಚಿಸಿದ ಮಾರ್ಗಗಳಲ್ಲೇ ಶಾಂತಿಯುತವಾಗಿ ಸಾಗಿಬಂದು ಗಮನ ಸೆಳೆದರು.

ವಾಟಾಳ್ ಎತ್ತಿನಬಂಡಿ ಚಳುವಳಿ

ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ಮಸೂದೆ ಖಂಡಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎತ್ತಿನಬಂಡಿ ಮೂಲಕ ಪ್ರತಿಭಟನೆ ನಡೆಸಲು ಮುಂದಾದ ಕನ್ನಡ ಒಕ್ಕೂಟದ ಮುಖಂಡರಾದ ವಾಟಾಳ್ ನಾಗರಾಜ್ ಹಾಗೂ ಸಾ.ರಾ.ಗೋವಿಂದು ಅವರನ್ನು ಪೊಲೀಸರು ತಡೆದ ಪ್ರಸಂಗ ಜರುಗಿತು.

ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎತ್ತಿನಬಂಡಿ ಚಳುವಳಿ ನಡೆಸಲು ಮುಂದಾದ ವೇಳೆ ಅನುಮತಿ ನೀಡುವ ಕುರಿತು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಮಾತನಾಡಿ, ಇದು ಪೊಲೀಸರ ಸರಕಾರವಾಗಿದೆ. ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಸರಕಾರದ ಕಾಯ್ದೆಗಳು ರೈತರಿಗೆ ಮರಣಶಾಸನವಾಗಿದ್ದು, ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಂಗಳಮುಖಿಯರ ಬೆಂಬಲ

ಕೇಂದ್ರ ಸರಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಗೆ ಮಂಗಳಮುಖಿಯರು ಬೆಂಬಲ ಸೂಚಿಸಿ, ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ 300ಕ್ಕೂ ಅಧಿಕ ಮಂದಿಗೆ ಮಂಗಳಮುಖಿಯರೇ ಊಟ ವಿತರಣೆ ಮಾಡಿದ ದೃಶ್ಯ ಕಂಡುಬಂದಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News