ಖಾತೆಗಳಿಗೆ ಕ್ಯಾತೆ ತೆಗೆಯುವುದು ಸಮಂಜಸವಲ್ಲ: ನೂತನ ಸಚಿವ ಉಮೇಶ್ ಕತ್ತಿ

Update: 2021-01-26 14:10 GMT

ಕಲಬುರ್ಗಿ, ಜ.26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಂಚಿಕೆ ಮಾಡಿರುವ ಖಾತೆಗಳಲ್ಲೆ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕೆ ಹೊರತು, ತಮಗೆ ಬೇಕಾದ ಖಾತೆಗಳಿಗಾಗಿ ಅಪಸ್ವರ ಎತ್ತುವುದು ಸಮಂಜಸವಾದ ಕ್ರಮವಲ್ಲ ಎಂದು ಅಸಮಾಧಾನಿತ ಸಚಿವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ತಿರುಗೇಟು ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ನನಗೆ ಕೊಟ್ಟಿರುವ ಖಾತೆಯಲ್ಲಿ ನನಗೆ ತೃಪ್ತಿಯಿದೆ. ಈ ಖಾತೆಯ ಜವಾಬ್ದಾರಿ ವಹಿಸಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತೇನೆ. ಒಂದು ವೇಳೆ ನನ್ನ ಖಾತೆಯನ್ನು ಬದಲಾಯಿಸಿದರೂ ನಾನು ಬೇಸರಪಟ್ಟುಕೊಳ್ಳುವುದಿಲ್ಲ ಎಂದರು.

ಕರ್ನಾಟಕವನ್ನು ಇಬ್ಭಾಗ ಮಾಡುವ ಬಗ್ಗೆ ನಾನು ಎಂದಿಗೂ ಆಲೋಚನೆ ಮಾಡಿದವನಲ್ಲ. ನಮ್ಮ ರಾಜ್ಯ ಅಖಂಡ ಕರ್ನಾಟಕವಾಗಿಯೆ ಇರಬೇಕು. ಆದರೆ, ಅಭಿವೃದ್ಧಿಯ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾದರೆ ಜನರ ಧ್ವನಿಯಾಗಿ ಪ್ರತಿಭಟಿಸಲೇಬೇಕಾಗುತ್ತದೆ ಎಂದು ಉಮೇಶ್ ಕತ್ತಿ ಹೇಳಿದರು.

ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಿ, ಉತ್ತರ ಕರ್ನಾಟಕ ಭಾಗಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಹಿಂದೆ ಸಿದ್ದರಾಮಯ್ಯ ಐದು ವರ್ಷ, ಕುಮಾರಸ್ವಾಮಿ ಒಂದು ವರ್ಷ ಅಧಿಕಾರದಲ್ಲಿದ್ದರೂ ಈ ಭಾಗಕ್ಕೆ ಯಾವುದೆ ಪ್ರಯೋಜನವಾಗಿಲ್ಲ ಎಂದು ಅವರು ಟೀಕಿಸಿದರು.

ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕಾಂಗ್ರೆಸ್, ಜೆಡಿಎಸ್ ಸರಕಾರಗಳು ಆದ್ಯತೆ ನೀಡಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಮಪರ್ಕವಾಗಿ ಕೆಲಸ ಮಾಡಲು ಆಗಲಿಲ್ಲ. ಮುಂಬರುವ ದಿನಗಳಲ್ಲಿ ಯಡಿಯೂರಪ್ಪ ನಾಯಕತ್ವದಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದು ಸೇರಿದಂತೆ ಈ ಭಾಗದ ನೀರಾವರಿ ಯೋಜನೆಗಳಿಗೆ ಆದ್ಯತೆ ಸಿಗಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಹೇಳಿದರು.

ಇದೇ ವೇಳೆ ಬಳ್ಳಾರಿ ಜಿಲ್ಲೆಯನ್ನು ಆಂಧ್ರಪ್ರದೇಶಕ್ಕೆ ಸೇರಿಸಬೇಕೆಂಬ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಳ್ಳಾರಿಯಿಂದ ವಿಜಯನಗರ ಪ್ರತ್ಯೇಕವಾಗಿ ಜಿಲ್ಲೆಯಾದರೆ ತೊಂದರೆ ಏನಿದೆ? ನಮ್ಮ ಬೆಳಗಾವಿ ಜಿಲ್ಲೆಯೂ ಮೂರು ಜಿಲ್ಲೆಗಳಾಗಿ ಇಬ್ಭಾಗವಾಗಬೇಕು ಎಂಬ ಬೇಡಿಕೆಯಿದೆ. ಆದರೆ, ನಮ್ಮ ರಾಜ್ಯದ ಜಿಲ್ಲೆಯನ್ನು ಬೇರೆ ರಾಜ್ಯಕ್ಕೆ ಸೇರಿಸಬೇಕೆಂಬ ವಿಚಾರವನ್ನು ಯಾರೊಬ್ಬರೂ ಮುಂದಿಡಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News