ರೈತರ ಸ್ಥಿತಿಗತಿಯ ಬಗ್ಗೆ ಪ್ರಧಾನಿ ಮೋದಿ ಒಮ್ಮೆಯೂ ವಿಚಾರಿಸಿಲ್ಲ: ಎಸ್.ಆರ್.ಪಾಟೀಲ್ ಕಿಡಿ

Update: 2021-01-26 14:21 GMT

ಬೆಂಗಳೂರು, ಜ.26: ಕೇಂದ್ರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದಿಲ್ಲಿ ಗಡಿ ಪ್ರದೇಶಗಳಲ್ಲಿ ಕಳೆದ ಎರಡು ತಿಂಗಳಿಂದ ಕೊರೆಯುವ ಚಳಿಯನ್ನು ಲೆಕ್ಕಿಸದೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರೈತರ ಸ್ಥಿತಿಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ವಿಚಾರಿಸಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಹಠಮಾರಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಬಿಜೆಪಿ ಸರಕಾರದ ನಡೆ ಖಂಡಿಸಿ ಬೆಂಗಳೂರಿನಲ್ಲಿ ರೈತರು ಟ್ರ್ಯಾಕ್ಟರ್ ರ್‍ಯಾಲಿ ನಡೆಸುತ್ತಿದ್ದು, ರೈತ ಸೇನೆಯ ಈ ಚಳವಳಿಗೆ ಕಾಂಗ್ರೆಸ್ ಬೆಂಬಲವಿದೆ ಎಂದು ಹೇಳಿದ್ದಾರೆ.

ಮಣ್ಣಿನ ಮಕ್ಕಳ ತಾಳ್ಮೆ ಪರೀಕ್ಷಿಸುವ ದುಸ್ಸಾಹಸಕ್ಕೆ ಮೋದಿ ನೇತೃತ್ವದ ಹಿಟ್ಲರ್ ಸರಕಾರ ಕೈ ಹಾಕಿದೆ. ಅನ್ನದಾತರಿಗೆ ಮರಣ ಶಾಸನವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಇನ್ನಾದರೂ ಕೇಂದ್ರ ಬಿಜೆಪಿ ಸರಕಾರ ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳ ಪರಿಸ್ಥಿತಿಗೆ ಕೇಂದ್ರ ಸರಕಾರವೇ ನೇರ ಹೊಣೆಯಾಗಬೇಕಾದೀತು ಎಂದು ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News