ದಿಲ್ಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ಭಯೋತ್ಪಾದಕರು: ಸಚಿವ ಬಿ.ಸಿ.ಪಾಟೀಲ್ ವಿವಾದಾತ್ಮಕ ಹೇಳಿಕೆ

Update: 2021-01-26 14:41 GMT

ಕೊಪ್ಪಳ, ಜ.26: ಹೊಸದಿಲ್ಲಿಯಲ್ಲಿ ನಡೆಯುತ್ತಿರುವುದು ರೈತರ ಪ್ರತಿಭಟನೆಯಲ್ಲ. ಹೋರಾಟಗಾರರು ರೈತರ ವೇಷದಲ್ಲಿರುವ ಭಯೋತ್ಪಾದಕರು. ಇವರ ಕೃತ್ಯಗಳನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳ ವಿರುದ್ಧ ಹೊಸದಿಲ್ಲಿಯಲ್ಲಿ ಕಳೆದ ಎರಡು ತಿಂಗಳಿಂದ ಹೋರಾಟ ಮಾಡುತ್ತಿರುವ ರೈತರು ಭಯೋತ್ಪಾದಕರು. ಅವರಿಗೆ ಪಾಕಿಸ್ತಾನ, ಕಾಂಗ್ರೆಸ್ ಸೇರಿದಂತೆ ಹೊರದೇಶಗಳಿಂದ ಬೆಂಬಲವಿದೆ ಎಂದು ಆರೋಪಿಸಿದ್ದಾರೆ.

ರೈತರು ಎಂದಿಗೂ ಪ್ರತಿಭಟನೆಗೆ ಇಳಿಯುವುದಿಲ್ಲ, ಕೆಂಪುಕೋಟೆಯ ಮೇಲೆ ಧ್ವಜವನ್ನು ಹಾರಿಸುವುದಿಲ್ಲ. ಆದರೆ, ಗಣರಾಜ್ಯೋತ್ಸವ ದಿನದಂದು ರೈತ ಧ್ವಜ ಹಾರಿಸಿದ್ದಾರೆಂದರೆ ಇವರಿಗೆ ಭಯೋತ್ಪಾದಕರ ನಂಟಿದೆ ಎಂದೇ ಅರ್ಥ. ದಿನೇ ದಿನೇ ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸು ಹೆಚ್ಚಾಗುತ್ತಿರುವುದರಿಂದ ಹತಾಶೆಗೊಂಡಿರುವ ಪ್ರತಿಪಕ್ಷಗಳು ರೈತರ ಹೆಸರಿನಲ್ಲಿ ಭಯೋತ್ಪಾದಕರನ್ನು ಕರೆತಂದು, ಭಯೋತ್ಪಾದನಾ ಕೃತ್ಯಗಳನ್ನು ಮಾಡಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಕಾನೂನು ಕೈಗೆತ್ತಿಕೊಳ್ಳುವವರು ರೈತರೇ ಆಗಿರಲಿ, ಯಾರೇ ಆಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತ ವೇಷದಲ್ಲಿರುವ ಭಯೋತ್ಪಾದಕರ ಕೃತ್ಯವನ್ನು ಖಂಡಿಸುತ್ತೇವೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News