ದೇಶದಲ್ಲಿಂದು ಪ್ರತಿಯೊಂದಕ್ಕೂ ಸಂಘರ್ಷ ಹಾದಿ: ದೇವೇಗೌಡ ಬೇಸರ

Update: 2021-01-26 15:51 GMT

ಬೆಂಗಳೂರು, ಜ.26: ದೇಶದ ಹಲವಾರು ಸಮಸ್ಯೆಗಳನ್ನು ಒಟ್ಟಾಗಿ ಬಗೆಹರಿಸಿಕೊಳ್ಳಬೇಕು. ಆದರೆ, ಇಂತಹ ವಾತಾವರಣ ದೇಶದಲ್ಲಿ ಇಲ್ಲ. ಮತ್ತೊಂದೆಡೆ ಪ್ರತಿಯೊಂದಕ್ಕೂ ಸಂಘರ್ಷದ ಹಾದಿ ಹಿಡಿಯುತ್ತಿದ್ದೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 72ನೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿಂದು ಸಮಸ್ಯೆ ಮತ್ತು ಬಿಕ್ಕಟ್ಟುಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಬದಲು ಸಂಘರ್ಷದ ಮಾರ್ಗ ಹಿಡಿಯುವ ಪರಿಸ್ಥಿತಿ ರೂಪುಗೊಂಡಿದೆ. ಅಧಿಕಾರಸ್ಥರು ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವತ್ತ ಗಮನ ಹರಿಸಬೇಕು ಎಂದರು.

ರೈತ ಸುಧಾರಣಾ ಕಾಯ್ದೆಗಳು ರೈತರಿಗೆ ಮಾರಕವಾಗಲಿವೆ ಎನ್ನುವುದನ್ನು ರಾಜ್ಯಸಭೆಯಲ್ಲಿ ಈ ಕಾಯ್ದೆಗಳು ಮಂಡನೆಯಾದಾಗ ಹೇಳಿದ್ದೆ. ತರಾತುರಿಯಲ್ಲಿ ವಿಧೇಯಕವನ್ನು ಅಂಗೀಕಾರ ಮಾಡಲಾಯಿತು. 2 ತಿಂಗಳ ಕಾಲ ವಿಧೇಯಕ ಮಂಡನೆಯನ್ನು ಮುಂದಕ್ಕೆ ಹಾಕಿ ಜಂಟಿ ಸದನ ಸಮಿತಿ ರಚಿಸಿ ಎಂಬ ಮಾತನ್ನು ಕೇಂದ್ರ ಸರಕಾರ ಪರಿಗಣಿಸಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಪ್ರತಿಭಟನೆಗಳು ಪಕ್ಷಾತೀತವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ರೈತರ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದ ಅವರು, ಮೊದಲಿನಿಂದಲೂ ಜೆಡಿಎಸ್ ರೈತರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದೆ ಎಂದರು.

ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಜೆಡಿಎಸ್ ಆಯೋಜಿಸಿದೆ. ಎಲ್ಲ ಜಿಲ್ಲೆಗಳಿಂದಲೂ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಹೋರಾಟದ ರೂಪುರೇಷೆಗಳನ್ನು ಈ ಸಮಾವೇಶದಲ್ಲಿ ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಇಡೀ ವಿಶ್ವವನ್ನೇ ತೀವ್ರವಾಗಿ ಕಾಡಿದ್ದ ಕೋವಿಡ್-19ಕ್ಕೆ ನಮ್ಮ ದೇಶದ ವಿಜ್ಞಾನಿ, ಸಂಶೋಧಕರು ಲಸಿಕೆ ಕಂಡುಹಿಡಿದು ಗೌರವ ತರುವ ಕೆಲಸ ಮಾಡಿದ್ದಾರೆ. ಹೊರ ರಾಷ್ಟ್ರಗಳಿಂದಲೂ ಲಸಿಕೆಗೆ ಬೇಡಿಕೆ ಬಂದಿರುವುದು ಹೆಮ್ಮೆಯ ವಿಚಾರ. ಇದರ ಕೀರ್ತಿ ಆ ವಿಜ್ಞಾನಿಗಳಿಗೆ ಸಲ್ಲಬೇಕು ಎಂದರು.

ವಿಧಾನ ಪರಿಷತ್‍ನ ಉಪಸಭಾಪತಿ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ನಿಲುವಿನ ಬಗ್ಗೆ ಮಾಜಿ ಸಚಿವ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಜೆಡಿಎಸ್‍ನ ವಿಧಾನ ಪರಿಷತ್ ಸದಸ್ಯರು ಸಭೆ ಸೇರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ನುಡಿದರು.

ಇದಕ್ಕೂ ಮೊದಲು ಜೆಡಿಎಸ್ ಕಾರ್ಯಾಲಯದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ನಾರಾಯಣ ರಾವ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಸದಸ್ಯ ಶರವಣ, ಮುಖಂಡ ಆರ್. ಪ್ರಕಾಶ್ ಮತ್ತಿತರರ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News