ಹರಕಲು ಬಾಯಿಯ ಕೃಷಿ ಮಂತ್ರಿಯನ್ನು ಸಂಪುಟದಿಂದ ಕೈಬಿಡಿ: ಕೋಡಿಹಳ್ಳಿ ಚಂದ್ರಶೇಖರ್

Update: 2021-01-26 15:55 GMT

ಬೆಂಗಳೂರು, ಜ.26: ರೈತ, ಮತ್ತವರ ಹೋರಾಟಗಳ ಕುರಿತು ಅರ್ಥವಿಲ್ಲದೆ ಮಾತನಾಡುವ ಹರಕಲು ಬಾಯಿ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನವನ ಮೈನದಾನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಟ್ರ್ಯಾಕ್ಟರ್ ಪರೇಡ್ ನಂತರ ಬಹಿರಂಗ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಯಾರು ಕೃಷಿ ಸಚಿವ, ರೈತರ ಕುರಿತು ಏನೇನೋ ಮಾತನಾಡುವ ಅವರದ್ದು ಹರಕುಬಾಯಿ. ಅಂಥವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿಟ್ಟುಕೊಂಡರೆ ಅವರಿಗೇ ಕೆಟ್ಟಹೆಸರು ಬರುತ್ತದೆ, ಕೈಬಿಟ್ಟರೆ ಒಳ್ಳೆಯದು ಎಂದು ಹೇಳಿದರು.

ಕೃಷಿ ಮಂತ್ರಿಗೆ ನೆಟ್ಟಗೆ ಮಾತನಾಡಲೂ ಬರುವುದಿಲ್ಲ. ಅಂಥವರನ್ನು ರೈತರ ಹೋರಾಟದ ಬಗ್ಗೆ ಮಾತನಾಡಲು ಮುಂದೆಬಿಡುವ ಯಡಿಯೂರಪ್ಪನವರೇ ಎಚ್ಚರವಿರಲಿ, ನಮ್ಮದೇ ಅನ್ನ ತಿಂದು ನಮ್ಮನ್ನೇ ಭಯೋತ್ಪಾದಕರು ಎಂದು ಹೀಯಾಳಿಸುವ ಸಚಿವರಿಂದ ನಿಮ್ಮ ಮರ್ಯಾದೆಯನ್ನು ನೀವೇ ಕಳೆದುಕೊಳ್ಳುತ್ತೀರಿ ಎಂದು ಅವರು ಎಚ್ಚರಿಸಿದರು.

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯೂ ರೈತರಿಗೆ ಅನ್ಯಾಯ ಮಾಡಿದ್ದಾರೆ. ಈಗ ಅದನ್ನೇ ನರೇಂದ್ರ ಪ್ರಧಾನಿ ನರೇಂದ್ರ ಮೋದಿಯೂ ಮಾಡುತ್ತಿದ್ದು, ರೈತರ ಕತ್ತು ಹಿಡಿದು ಹೊರಗೆ ತಳ್ಳೋ ದೃಶ್ಯಗಳನ್ನು ನಾವಿಂದು ನೋಡುತ್ತಿದ್ದೇವೆ. ಅಲ್ಲದೆ, ಮೋದಿಯ ಮಂಕಿಬಾತ್‍ನಲ್ಲಿ ಒಂದು ಮಾತಾದರೂ ರೈತರ ಬಗ್ಗೆ ಮಾತಾಡಿದ್ದಾರಾ? ಇಂದಿರಾ ಅವರಿಗಾದ ಗತಿಯೇ ಮೋದಿಗೂ ಆಗಲಿದೆ ಎಂದರು.

ಈ ಸರ್ವಾಧಿಕಾರಿ ಧೋರಣೆ ಇನ್ನುಮುಂದೆ ನಡೆಯುವುದಿಲ್ಲ ಮೋದಿಯವರೇ. ಸ್ವಲ್ಪ ಹದ್ದುಬಸ್ತಿನಲ್ಲಿ ಇರೋದು ನಿಮಗೇ ಒಳ್ಳೆಯದು. ಈಸ್ಟ್ ಇಂಡಿಯಾ ಕಂಪೆನಿಯಿಂದ ದೇಶವನ್ನು ವಾಪಾಸ್ ಪಡೆಯಲು ಬಹಳ ಹೋರಾಟ ನಡೆದಿದೆ. ಈಗ ನೀವು ತಿರುಗಿ ಕಾರ್ಪೋರೇಟ್ ಕಂಪೆನಿಗಳಿಗೆ ವಾಪಾಸ್ ಕೊಡಲು ಹೊರಟಿದ್ದೀರಾ ಎಂದ ಅವರು, ಮೋದಿಯವರೇ ಈ ದೇಶ ನಿಮ್ಮ ಅಪ್ಪನದ್ದಲ್ಲ, ನಮ್ಮ ಅಪ್ಪಂದಿರು ಬೆವರು ಹರಿಸಿ ಕಟ್ಟಿದ ದೇಶ ಇದು. ಹೀಗಾಗಿ ನಿಮ್ಮ ಹಿಟ್ಲರ್ ಆಡಳಿತವನ್ನು ನಿಲ್ಲಿಸಿ. ಇಲ್ಲದಿದ್ದರೆ, ಅನುಭವಿಸುತ್ತೀರಿ ಎಂದು ಕೋಡಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ರಾಜಧಾನಿ ಉಸಿರುಗಟ್ಟುತ್ತೆ ಹುಷಾರ್: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಧ್ಯೇಯ ಮರೆತು ಕಾರ್ಪೋರೇಟ್ ಕಂಪೆನಿ, ಎಂಎನ್‍ಸಿ ಕಂಪೆನಿ ಬೇಕು ಎಂದು ಹೇಳುತ್ತಿದ್ದೀರಿ ಎಂದ ಅವರು, ಅನ್ನದಾತರ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಿ. ಇಲ್ಲವಾದರೆ ರಾಜಧಾನಿ ಉಸಿರುಗಟ್ಟುವಂತೆ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಬಸವನಗುಡಿಯವರಿಂದ ಪಾಠ ಬೇಕಿಲ್ಲ

ಗೋಹತ್ಯೆ ತಡೆ ಕಾಯ್ದೆ ಬೇಕೇ? ಬೇಡವೇ? ಎನ್ನುವುದನ್ನು ರೈತರಾದ ನಾವು ನಿರ್ಧರಿಸುತ್ತೇವೆ. ಹಸು ಸಾಕುವುದು ಹೇಗೆಂದು ನಮಗೆ ಚೆನ್ನಾಗಿ ಗೊತ್ತು. ಆದರೆ, ಇದನ್ನು ನಾವು ಜಯನಗರ, ಬಸವನಗುಡಿಯವರಿಂದ ಪಾಠ ಕಲಿಯಬೇಕಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ನೀವು ಅನ್ನ ತಿನ್ನುವ ಜನರಾ?

ರೈತರಿಗೆ ಪಾಕಿಸ್ತಾನ ಮತ್ತು ಖಾಲಿಸ್ತಾನಿಗಳ ಬೆಂಬಲ ಇದೆ ಎಂದು ಬಿಜೆಪಿ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ. ರೈತರನ್ನೆ ದೇಶದ್ರೋಹಿಗಳು ಎಂದು ಕರೆಯುತ್ತಿದ್ದಾರೆ. ಇದು ಹೊಟ್ಟೆಗೆ ಅನ್ನ ತಿನ್ನುವ ಜನರು ಆಡುವ ಮಾತುಗಳೇ. ನಿಮಗೆ ಎಲ್ಲಿಲ್ಲದ ದುರಹಂಕಾರ ಬರಲು ಕಾರಣ ರೈತರೆ ಆಗಿದ್ದಾರೆ. ಉತ್ತು ಬಿತ್ತು ಅನ್ನ ಹಾಕಿದ್ದೀವಲ್ವಾ? ಅದಕ್ಕೆ ಹೀಗೆ ಮಾತನಾಡುತ್ತಿದ್ದೀರಾ?

-ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ

**

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News