×
Ad

ರೈತರಿಗೆ ಬೇಡವಾದ ಕೃಷಿ ಕಾಯ್ದೆ ಕೇಂದ್ರ ಸರಕಾರಕ್ಕೆ ಯಾಕೆ ಬೇಕು: ಡಿ.ಕೆ.ಶಿವಕುಮಾರ್ ಪ್ರಶ್ನೆ

Update: 2021-01-26 21:32 IST

ಬೆಂಗಳೂರು, ಜ.26: ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ದೇಶದ ಜನ, ರೈತರು ತಮ್ಮ ಭವಿಷ್ಯ ಹಾಗೂ ಅಸ್ತಿತ್ವ ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶ ಅನ್ನದಾತ, ಕೃಷಿಕನ ರಕ್ಷಣೆಗೆ ನಿಲ್ಲಬೇಕಾದ ಅನಿವಾರ್ಯತೆ ಬಂದಿದೆ. ರೈತರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಲಿ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಕೆಪಿಸಿಸಿ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿ ಮಾಡಿರುವ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ಹೊಸದಿಲ್ಲಿಯಲ್ಲಿ ಲಕ್ಷಾಂತರ ಹಾಗೂ ರಾಜ್ಯದಲ್ಲಿ ಸಾವಿರಾರು ರೈತರು ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ ಹೋರಾಟ ಮಾಡುತ್ತಿದ್ದಾರೆ. ರೈತರಿಗೆ ಬೇಡವಾದ ಕೃಷಿ ಕಾಯ್ದೆ ಕೇಂದ್ರ ಸರಕಾರಕ್ಕೆ ಯಾಕೆ ಬೇಕೆಂದು ಪ್ರಶ್ನಿಸಿದ್ದಾರೆ.

ನೂತನ ಕೃಷಿ ಕಾಯ್ದೆಗಳು ರೈತರಿಗೆ ಒಳ್ಳೆಯದಾಗುತ್ತದೆಂದು ಬಿಜೆಪಿ ಸರಕಾರ ಹೇಳುತ್ತಿದೆ. ಆದರೆ, ರೈತರೊಂದಿಗೆ ನಡೆದ 11 ಸುತ್ತಿನ ಮಾತುಕತೆಯಲ್ಲಿ ಈ ಕೃಷಿ ಕಾಯ್ದೆಗಳು ರೈತರಿಗೆ ಹೇಗೆ ಪ್ರಯೋಜನವಾಗುತ್ತದೆ ಎಂದು ಹೇಳಲು ಸಾಧ್ಯವಾಗಿಲ್ಲ. ಇಂತಹ ಬಂಡವಾಳಶಾಹಿಗಳಿಗೆ ಪ್ರೇರಕವಾಗುವ ಕಾಯ್ದೆಗಳನ್ನು ಮುಂದಿಟ್ಟುಕೊಂಡು ದೇಶದ ಅನ್ನದಾತರನ್ನು ಸರ್ವನಾಶ ಮಾಡಲು ಬಿಜೆಪಿ ಸರಕಾರ ಮುಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

200 ವರ್ಷಗಳ ಬ್ರಿಟೀಷರ ಆಳ್ವಿಕೆ ನಂತರ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ಭಾರತ ಅಳವಡಿಸಿಕೊಂಡು ಗಣತಂತ್ರ ರಾಷ್ಟ್ರವಾದ ಪವಿತ್ರ ದಿನವಿದು. ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯಲ್ಲಿ ಭಾರತ ಏಳು ದಶಕಗಳ ಸಂಭ್ರಮ ಆಚರಿಸುತ್ತಿದೆ. ಭಾರತದ ಪ್ರಜೆಗಳಾದ ನಾವು ಸೋದರತೆ, ಸಮಾನತೆ ಆಧಾರದ ಮೇಲೆ, ಲಿಂಗ, ವರ್ಣ, ಜಾತಿ, ಧರ್ಮ ಭೇದ ಮರೆತು ಪ್ರಜಾಪ್ರಭುತ್ವ, ಸಮಾಜವಾದಿ ಗಣರಾಜ್ಯ ಸ್ಥಾಪಿಸಿರುತ್ತೇವೆಂದು ಅವರು ತಿಳಿಸಿದ್ದಾರೆ.

ನಾವು ಧಾರ್ಮಿಕ ಹಬ್ಬ ಆಚರಿಸುವ ರೀತಿಯಲ್ಲೇ ದೇಶದ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಇಡೀ ರಾಷ್ಟ್ರ ಇಂದು ಕವಲುದಾರಿಯಲ್ಲಿ ನಿಂತಿದೆ. ಕಳೆದ ಒಂದು ವರ್ಷದಿಂದ ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ವಿಚಾರದಲ್ಲಿ ದೇಶದುದ್ದಗಲಕ್ಕೂ ಹೋರಾಟ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸಂವಿಧಾನದ ಆಶಯಗಳ ಉಳಿವಿಗಾಗಿ ಒಗ್ಗಟ್ಟಿನಿಂದ ಮುನ್ನಡೆಯಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಬಳಕೆ ವಸ್ತುಗಳು ದುಬಾರಿಯಾಗಿ ಸಾಮಾನ್ಯ ಜನರ ಬದುಕಿಗೆ ಹೊರೆಯಾಗಿದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧದ ಹೋರಾಟ ಚುರುಕು ಮಾಡಬೇಕಾಗಿದೆ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ರೂಪಿಸುವ ಅನಿವಾರ್ಯತೆ ಇದೆ. ಸದ್ಯ ಈಗ ದೇಶ ಯಾವ ಪರಿಸ್ಥಿತಿಯಲ್ಲಿದೆ ಎಂದರೆ, ಸ್ವತಂತ್ರ ಭಾರತದ ಪ್ರಜೆಗಳಾಗಿದ್ದರೂ ನಮ್ಮ ಸ್ವಾತಂತ್ರ್ಯ, ಹಕ್ಕಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಜಾತಿ, ಧರ್ಮ, ಭಾಷೆಗಳ ಹೆಸರಲ್ಲಿ ಸಂಘರ್ಷ ತರುತ್ತಿರುವ ಬಿಜೆಪಿಯು ಗಣತಂತ್ರ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ. ಹೀಗಾಗಿ ನಾವೆಲ್ಲ ಒಗ್ಗಟ್ಟಿನಿಂದ ದೇಶ, ಸಂವಿಧಾನ, ಸ್ವಾತಂತ್ರ್ಯ ರಕ್ಷಣೆಗೆ, ದೇಶವನ್ನು ಅಭಿವೃದ್ಧಿಶೀಲವಾಗಿ ಪರಿವರ್ತಿಸಲು ನಾವೆಲ್ಲ ಕೆಲಸ ಮಾಡಬೇಕಾಗಿದೆ.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News