ಬಿಜೆಪಿ ನಾಯಕರ ಹೆಸರಿನಲ್ಲಿ ವಂಚನೆ ಪ್ರಕರಣ: ಯುವರಾಜ್ ಮನೆಯಲ್ಲಿ ಹಲವು ಸಚಿವರ ಅಧಿಕೃತ ಪತ್ರಗಳು ?
ಬೆಂಗಳೂರು, ಜ.26: ಬಿಜೆಪಿ ನಾಯಕರ ಹೆಸರಿನಲ್ಲಿ ಬಹುಕೋಟಿ ವಂಚನೆ ಮಾಡಿರುವ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್, ಮನೆಯಲ್ಲಿ ಹಲವು ಸಚಿವರ ಅಧಿಕೃತ ಪತ್ರಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ಡಿ.16ರಂದು ಇಲ್ಲಿನ ನಾಗರಭಾವಿಯ ಯುವರಾಜ್ ನಿವಾಸದ ಮೇಲೆ ಸಿಸಿಬಿ ಎಸಿಪಿ ನಾಗರಾಜ್ ನೇತೃತ್ವದ ತಂಡ ದಾಳಿ ನಡೆಸಿದಾಗ ಆರೋಪಿ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು, ಚಿನ್ನಾಭರಣ ಪತ್ತೆಯಾಗಿತ್ತು. ಜತೆಗೆ, ಕೆಲ ಸಚಿವರ ಹೆಸರಿನ ಅಧಿಕೃತ ಪತ್ರಗಳು ಸಿಕ್ಕಿದ್ದು, ಇದು ಅಸಲಿ ಅಥವಾ ನಕಲಿ ಎನ್ನುವ ಕುರಿತು ಪರಿಶೀಲನೆ ಮಾಡಲಾಗುತ್ತಿದೆ.
ಸದ್ಯ ಯುವರಾಜ್ ಮೊಬೈಲ್‍ನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿ, ಮಾಹಿತಿ ಸಂಗ್ರಹಿಸಿದ್ದು, ಈತನ ಮೊಬೈಲ್‍ನಲ್ಲಿ ಪ್ರಭಾವಿ ರಾಜಕಾರಣಿಗಳು ಸೇರಿದಂತೆ ರಾಜ್ಯದ ಕೆಲ ಸಚಿವರ ಮೊಬೈಲ್ ನಂಬರ್ ಗಳು ಹಾಗೂ ಆತನ ಮೊಬೈಲ್ ಗ್ಯಾಲರಿಯಲ್ಲಿ ನೂರಕ್ಕೂ ಹೆಚ್ಚು ಯುವತಿಯರ ಫೋಟೋಗಳು ಪತ್ತೆಯಾಗಿವೆ ಎನ್ನಲಾಗಿದೆ.
ಅಧಿಕೃತ ಪತ್ರಗಳ ವಿಚಾರವಾಗಿ ಯುವರಾಜ್‍ನನ್ನು ಪ್ರಶ್ನಿಸಿದರೂ, ಇದುವರೆಗೂ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಹೀಗಾಗಿ ಸಚಿವರ ಕಚೇರಿಗೆ ಯುವರಾಜ್ ಮನೆಯಲ್ಲಿ ಜಪ್ತಿ ಮಾಡಿರುವ ಪತ್ರಗಳ ಪ್ರತಿ ನೀಡಿ ಪರಿಶೀಲಿಸಿ, ಪ್ರಾಥಮಿಕ ಮಾಹಿತಿ ಸಂಗ್ರಹಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.