ಸಚಿವ ಅಶೋಕ್ ಆಪ್ತ ಸಹಾಯಕನಿಂದ ಲಂಚಕ್ಕೆ ಬೇಡಿಕೆ: ಆರೋಪ

Update: 2021-01-26 16:50 GMT

ಚಿಕ್ಕಮಗಳೂರು, ಜ.26: ಕಂದಾಯ ಸಚಿವ ಆರ್.ಅಶೋಕ್ ಅವರ ಆಪ್ತ ಸಹಾಯಕನೋರ್ವ ಜಿಲ್ಲೆಯ ಶೃಂಗೇರಿ ತಾಲೂಕಿನ ಸಬ್ ರಿಜಿಸ್ಟ್ರಾರ್ ಬಳಿ ಲಂಚ ಕೇಳಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಧಿಕಾರಿ ಪೊಲೀಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.

ಕಳೆದ ಜ.24ರಂದು ಕಂದಾಯ ಸಚಿವ ಆರ್.ಅಶೋಕ್ ಚಿಕ್ಕಮಗಳೂರು ಜಿಲ್ಲೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದರು. ಈ ವೇಳೆ ಅವರು ಶೃಂಗೇರಿಗೂ ಭೇಟಿ ನೀಡಿದ್ದರು. ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಆಪ್ತ ಸಹಾಯಕ ಗಂಗಾಧರ್ ಎಂಬವರು ಶೃಂಗೇರಿ ತಾಲೂಕು ಕಚೇರಿಯ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅವರಿಗೆ ಕರೆ ಮಾಡಿ, ಸಚಿವರು ಭೇಟಿಯಾಗಲು ಹೇಳಿದ್ದು, ಸಂಜೆ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದರೆಂದು ಹೇಳಲಾಗುತ್ತಿದೆ.

ಅದರಂತೆ ಅಂದು ಸಂಜೆ 7:30ಕ್ಕೆ ಶೃಂಗೇರಿ ಪಟ್ಟಣದ ಆದಿಚುಂಚನಗಿರಿ ಸಭಾ ಭವನಕ್ಕೆ ಸಚಿವ ಆರ್.ಅಶೋಕ್ ಆಗಮಿಸಿದ್ದು, ಈ ವೇಳೆ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಸಚಿವರ ಆಪ್ತ ಕಾರ್ಯದರ್ಶಿ ಗಂಗಾಧರ್ ಅವರನ್ನು ಸಭಾ ಭವನದ ಕೊಠಡಿಯೊಂದರಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಸಚಿವರ ಆಪ್ತ ಸಹಾಯಕ ಲಂಚ ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಚೆಲುವರಾಜ್ ನಾನು ಕೊಡೋದೂ ಇಲ್ಲ, ತೆಗೆದುಕೊಳ್ಳುವುದೂ ಇಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಅದೇ ದಿನ ರಾತ್ರಿ ಆಪ್ತ ಕಾರ್ಯದರ್ಶಿ ಗಂಗಾಧರ್ ಮತ್ತೆ ಚೆಲುವರಾಜ್ ಗೆ ವಾಟ್ಸ್ಆ್ಯಪ್ ಕರೆ ಮಾಡಿದ್ದು, ಈ ವೇಳೆ 'ನೀವು ಲಂಚ ಕೇಳಿದ್ದೀರಿ, ನಾನು ಕೊಡಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ. ಡ್ರಾಫ್ಟ್ ರೆಡಿ ಮಾಡುತ್ತಿದ್ದೇನೆ' ಎಂದು ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಹೇಳಿದ್ದಾರೆಂದು ತಿಳಿದು ಬಂದಿದೆ.

ಸಚಿವರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳನ್ನು ಸುಲಿಗೆ ಮಾಡುವ ಕೆಲಸ ನಡೆಯುತ್ತಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಸಬ್ ರಿಜಿಸ್ಟ್ರಾರ್ ಚೆಲುವರಾಜ್ ರವಿವಾರ ಸುದ್ದಿಗಾರರಿಗೆ ತಿಳಿಸಿದ್ದು, ಅದರಂತೆ ಅವರು ಶೃಂಗೇರಿ ಪೊಲೀಸರಿಗೆ ಕಂದಾಯ ಸಚಿವರ ಆಪ್ತ ಸಹಾಯಕ ಗಂಗಾಧರ್ ವಿರುದ್ಧ ಸೋಮವಾರ ಸಂಜೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ಚೆಲುವರಾಜ್ ಪ್ರತಿಕ್ರಿಯಿಸಿದ್ದು, ''ಜ.20ರಂದು ಕಂದಾಯ ಸಚಿವ ಜಿಲ್ಲೆಗೆ ಆಗಮಿಸುವ ವೇಳಾ ಪಟ್ಟಿ ವಾಟ್ಸ್ಆ್ಯಪ್ ಮೂಲಕ ನನ್ನ ಮೊಬೈಲ್ ಗೆ  ಬಂದಿತ್ತು. ಜ.24ರಂದು ಸಚಿವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿಯೊಬ್ಬರು, ಶೃಂಗೇರಿಗೆ ಸಚಿವರು ಬರುತ್ತಾರೆ. ನಿಮ್ಮ ಬಳಿ ಮಾತನಾಡುವುದಿದೆ ಸಿಗಬೇಕು ಎಂದಿದ್ದರು. ಅದರಂತೆ ಜ.24ರಂದು ರವಿವಾರ ಸಂಜೆ ಶೃಂಗೇರಿ ಪಟ್ಟಣದ ಆದಿಚುಂಚನಗಿರಿ ಸಭಾಭವನಕ್ಕೆ ಸಚಿವರು ಆಗಮಿಸಿದ್ದರು. ನಾನು ಸಚಿವರ ಆಪ್ತ ಸಹಾಯಕನನ್ನು ಕಾಣಲು ಅಲ್ಲಿಗೆ ಹೋಗಿದ್ದೆ. ಅವರು ಯಾರೆಂದು ನನಗೆ ಗೊತ್ತಿರಲಿಲ್ಲ. ನಾನು ಅವರ ಬಳಿ ಹೋದಾಗ, ಲಂಚ ಕೇಳಿದ್ದಾರೆ. ನಾನು ಲಂಚ ಕೊಡೋದಿಲ್ಲ ಎಂದು ಹೇಳಿ ಹಿಂದಿರುಗಿದ್ದೆ. ರಾತ್ರಿ ಮತ್ತೆ ಕರೆ ಮಾಡಿದ್ದ ಗಂಗಾಧರ್, ಫೈಲ್ ಕೊಡಲಿಲ್ಲ ಎಂದಿದ್ದಾರೆ. ನನ್ನ ಬಳಿ ಯಾವುದೇ ಫೈಲ್ ಇಲ್ಲ. ನೀವು ಲಂಚ ಕೇಳಿದ್ದೀರಿ, ಈ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತೇನೆಂದು ಹೇಳಿದ್ದೆ. ಅದರಂತೆ ಸೋಮವಾರ ಪೊಲೀಸರಿಗೆ ದೂರು ನೀಡಿದ್ದೇನೆ. ಸಚಿವರ ಹೆಸರಿನಲ್ಲಿ ಲಂಚ ಕೇಳುವ ಕೆಲಸ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಚಿಕ್ಕಮಗಳೂರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಶೃಂಗೇರಿ ತಾಲೂಕಿನ ಸಬ್ ರಿಜಿಸ್ಟ್ರಾರ್ ಬಳಿ ಕಂದಾಯ ಸಚಿವ ಆರ್.ಅಶೋಕ್ ಅವರ ಖಾಸಗಿ ಆಪ್ತ ಕಾರ್ಯದರ್ಶಿ ಗಂಗಾಧರ್ ಲಂಚ ಕೇಳಿದ್ದಾರೆಂಬ ಆರೋಪ ಕೇಳಿ ಬಂದಿದೆ. ಆರ್.ಅಶೋಕ್ ಅವರು ಸರಕಾರಿ ಅಧಿಕಾರಿಗಳನ್ನು ಹಣಕ್ಕಾಗಿ ಸುಲಿಗೆ ಮಾಡುವ ವ್ಯಕ್ತಿಯಲ್ಲ. ಅಂತಹ ದರ್ದು ಅವರಿಗೆ ಇಲ್ಲವೇ ಇಲ್ಲ. ಅಧಿಕಾರಿ ಬಳಿ ಲಂಚ ಕೇಳಿರುವ ಆರೋಪ ಸಚಿವರ ಗಮನಕ್ಕೂ ಬಂದಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಆರ್.ಅಶೋಕ್ ತಮ್ಮ ಆಪ್ತ ಕಾರ್ಯದರ್ಶಿಗೆ ಈಗಾಗಲೇ ಗೇಟ್‍ಪಾಸ್ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News