ಅನ್ನದಾತರಿಗೆ ಬೇಡವಾದ ಕೃಷಿ ಮಸೂದೆಗಳನ್ನು ಕೇಂದ್ರ ಸರಕಾರ ಹಿಂಪಡೆಯಲಿ: ಕೆ.ಎಂ.ಅಬೂಬಕರ್ ಸಿದ್ದಿಕ್
ಚಿಕ್ಕಮಗಳೂರು, ಜ.26: ಭಾರತವು ಕೃಷಿ ಪ್ರಧಾನ ದೇಶವಾಗಿರುವುದರಿಂದ ಬಹುಸಂಖ್ಯಾತರು ರೈತರೇ ಆಗಿದ್ದಾರೆ. ಇಲ್ಲಿನ ಪ್ರಜಾಪ್ರಭುತ್ವವು ಬಹುತೇಕ ರೈತ ಪ್ರಭುತ್ವವೇ ಆಗಿದೆ. ಇಂತಹ ರೈತ ಪ್ರಭುಗಳು ತಮ್ಮ ಹಿತರಕ್ಷಣೆಗಾಗಿ ಬೀದಿಗೆ ಬೀಳಬೇಕಾಗಿ ಬಂದಿರುವುದು ಅತ್ಯಂತ ದುರದೃಷ್ಟಕರ ಎಂದು ಸುನ್ನೀ ಯುವಜನ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಅಬೂಬಕರ್ ಸಿದ್ದಿಕ್ ಮೊಂಟುಗೋಳಿ ಹೇಳಿದರು.
ಎಸ್‍ವೈಎಸ್ ಸಂಘಟನೆಯ ಜಿಲ್ಲಾ ಸಮಿತಿಯು ಗಣರಾಜ್ಯೋತ್ಸವ ದಿನದಂದು ರೈತ ಹೋರಾಟಗಾರರ ಬೆಂಬಲಾರ್ಥ ನಡೆಸಿದ 'ಫ್ಲ್ಯಾಗ್ ಮಾರ್ಚ್' ಉದ್ದೇಶಿಸಿ ಮಾತನಾಡಿದ ಅವರು, ಕೃಷಿ ಸಮೃದ್ಧವಾಗಿ ಬೆಳೆದರೆ ಮಾತ್ರ ದೇಶದಲ್ಲಿ ಸುಭಿಕ್ಷೆ ನೆಲೆಸುತ್ತದೆ. ಹೊಲಗಳಲ್ಲಿ ದುಡಿಯಬೇಕಾದ ಕೃಷಿಕರು ಹೋರಾಟದ ಬೀದಿಗಿಳಿದರೆ ದೇಶದ ಜನ ಅನ್ನ ತಿನ್ನಲು ಸಾಧ್ಯವಿಲ್ಲ. ದಿಲ್ಲಿಯಲ್ಲಿ ಪ್ರತಿಕೂಲ ವಾತಾವರಣವನ್ನೂ ಲೆಕ್ಕಿಸದೆ ಹೋರಾಟ ನಿರತರಾಗಿರುವ ರೈತರ ಜೊತೆ ಹತ್ತು ಸುತ್ತಿನ ಮಾತುಕತೆ ನಡೆಸಿದರೂ ಸಮಸ್ಯೆಯನ್ನು ಪರಿಹರಿಸಲು ಸರಕಾರಕ್ಕೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಅನ್ನದಾತರಿಗೆ ಅಗತ್ಯವಿಲ್ಲದ ಮಸೂದೆಯನ್ನು ಯಾರ ಹಿತಕ್ಕಾಗಿ ಜಾರಿಗೊಳಿಸಬೇಕು. ಇನ್ನಾದರೂ ಪ್ರತಿಷ್ಠೆಯನ್ನು ಬದಿಗಿಟ್ಟು ವಿವಾದಾತ್ಮಕ ಮಸೂದೆಯನ್ನು ಹಿಂಪಡೆಯುವ ಮೂಲಕ ರೈತರ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲು ಸರಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಇದಕ್ಕೂ ಮುನ್ನ 72 ರಾಷ್ಟ್ರಧ್ವಜಗಳೊಂದಿಗೆ ತಾಲೂಕು ಕಚೇರಿಯಿಂದ ಆಜಾದ್ ವೃತ್ತದವರೆಗೆ ಸಂಘಟನೆಯ ಸದಸ್ಯರು ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಬೂಬಕರ್, ರಾಜ್ಯ ಕಾರ್ಯದರ್ಶಿ ಸಯ್ಯದ್ ತಂಙಲ್, ಜಿಲ್ಲಾ ಸಂಯುಕ್ತ ಜಮಾತ್ ಅಧ್ಯಕ್ಷ ಯೂಸುಫ್ ಹಾಜಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಫ್ವಾನ್ ಸಖಾಫಿ ಶಾಂತಿಪುರ, ಮುನೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.