ಅಕ್ರಮ ಗಣಿಗಾರಿಕೆ ಸಕ್ರಮಗೊಳಿಸಲು ಕಾಯ್ದೆಗೆ ತಿದ್ದುಪಡಿ: ಸಚಿವ ಮುರುಗೇಶ್ ನಿರಾಣಿ
ಬೆಂಗಳೂರು, ಜ.26: ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಿ ರಾಜ್ಯದಲ್ಲಿ ಹೊಸದಾಗಿ ಗಣಿ ಕಾಯ್ದೆ ಜಾರಿ ಮಾಡುವ ಸಂಬಂಧ ಜ.27 ಮತ್ತು 28ರಂದು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ಅಧಿಕೃತ ಮಾಡಲು ಹೊಸ ನಿಯಮ ಜಾರಿ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಕರ್ನಾಟಕದಲ್ಲಿ ಮಾತ್ರ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿಲ್ಲ. ದೇಶಾದ್ಯಂತ ಇದು ನಡೆಯುತ್ತಿದೆ. ಇದನ್ನು ಯಾವ ರೀತಿ ತಡೆಗಟ್ಟಬೇಕು ಎಂಬುದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಅಭಿಪ್ರಾಯವನ್ನು ಪಡೆಯಲಿದ್ದೇವೆ ಎಂದು ತಿಳಿಸಿದ್ದಾರೆ.
ದೇಶದ ಇತರೆ ರಾಜ್ಯಗಳಲ್ಲಿ ಯಾವ ರೀತಿ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಕಾಯ್ದೆಯನ್ನು ಜಾರಿ ಮಾಡಿದ್ದಾರೆ ಎಂಬುದರ ಬಗ್ಗೆಯೂ ನಾವು ಅಧ್ಯಯನ ನಡೆಸುತ್ತಿದ್ದೇವೆ. ಗಣಿಗಾರಿಕೆ ಮಾಡುವುದು ತಪ್ಪಲ್ಲ. ಆದರೆ, ಅಕ್ರಮವಾಗಿ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ. ಅಭಿವೃದ್ದಿಗಾಗಿ ಗಣಿಗಾರಿಕೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದ ಹಾಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್ ರ್ಯಾಲಿ ವಿರೋಧ ಪಕ್ಷಗಳ ಕುಮ್ಮಕ್ಕಿನಿಂದ ನಡೆಯುತ್ತಿದೆ. ವಿರೋಧ ಪಕ್ಷದವರು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರೈತರು ಟ್ರ್ಯಾಕ್ಟರ್ ರ್‍ಯಾಲಿ ರಾಜಕೀಯ ದುರದ್ದೇಶದಿಂದ ಕೂಡಿದೆ. ಇದರಲ್ಲಿ ನಿಜವಾದ ಕಳಕಳಿ ಇಲ್ಲ. ರ್‍ಯಾಲಿ ಮುಗಿದ ಬಳಿಕ ಇದರ ಹಿಂದೆ ಯಾರಿದ್ದಾರೆ. ಇದಕ್ಕೆ ಕುಮ್ಮಕ್ಕು ನೀಡಿದವರು ಯಾರು ಎಂಬುದು ಗೊತ್ತಾಗಲಿದೆ. ಕೆಲವರು ತಮ್ಮ ರಾಜಕೀಯಕ್ಕಾಗಿ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ಖಾತೆ ವಿಚಾರದಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ. ನಮ್ಮಲ್ಲಿ ಇರುವ ಸಚಿವರು ಬಿಟ್ಟ ಖಾತೆಯನ್ನು ನಾನು ತೆಗೆದುಕೊಳ್ಳಲು ಸಿದ್ಧನಿದ್ದೇನೆ. ಇದರಲ್ಲಿ ಯಾವುದೇ ಬೇಸರವಿಲ್ಲ.
-ಮುರುಗೇಶ್ ನಿರಾಣಿ, ಗಣಿಗಾರಿಕೆ ಮತ್ತು ಭೂವಿಜ್ಞಾನ ಸಚಿವ