ಗುರುವಾರದಿಂದ ವಿಧಾನ ಮಂಡಲ ಜಂಟಿ ಅಧಿವೇಶನ

Update: 2021-01-27 12:28 GMT

ಬೆಂಗಳೂರು, ಜ. 27: ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ವೇದಿಕೆ ಕಲ್ಪಿಸಿರುವ ಹಾಗೂ ‘ಸರಕಾರದ ಮುನ್ನೋಟ'ವನ್ನು ಪ್ರಕಟಿಸುವ ವಿಧಾನ ಮಂಡಲ ಜಂಟಿ ಅಧಿವೇಶನ ನಾಳೆ(ಜ.28)ಯಿಂದ ಆರಂಭಗೊಳ್ಳಲಿದ್ದು, ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಜಂಟಿ ಅಧಿವೇಶನ ರಾಜ್ಯಪಾಲ ವಜೂಭಾಯಿ ವಾಲಾ ಅವರ ಭಾಷಣದೊಂದಿಗೆ ವಿದ್ಯುಕ್ತವಾಗಿ ಆರಂಭಗೊಳ್ಳಲಿದ್ದು, ಫೆ.5ರವರೆಗೆ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟು ಏಳು ದಿನಗಳ ಕಾಲ ನಡೆಯಲಿದ್ದು, ಜ.29ರಿಂದ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.

ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ತಿದ್ದುಪಡಿ, ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ, ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗ ಕಲ್ಲು ಕ್ವಾರಿಯಲ್ಲಿನ ಸ್ಫೋಟ, ರಾಜ್ಯದ ಆರ್ಥಿಕ ಪರಿಸ್ಥಿತಿ, ಸಂಪುಟ ವಿಸ್ತರಣೆ, ಸಚಿವರಿಗೆ ಖಾತೆ ಹಂಚಿಕೆ ಗೊಂದಲ ಸಹಿತ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ವಿಪಕ್ಷ ಕಾಂಗ್ರೆಸ್-ಜೆಡಿಎಸ್ ಅಸ್ತ್ರಗಳನ್ನು ಸಜ್ಜುಗೊಂಡಿವೆ.

ಈ ಮಧ್ಯೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು, ಕೊರೋನ ಸೋಂಕನ್ನು ಅತ್ಯಂತ ‘ಸಮರ್ಥ'ವಾಗಿ ನಿಭಾಯಿಸಿದ್ದೇವೆ ಎಂಬ ಉಮೇದಿಯಲ್ಲಿರುವ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಸಹಿತ ಸಂಪುಟ ಸಹೊದ್ಯೋಗಿಗಳು ಸಿದ್ಧರಾಗಿದ್ದಾರೆ.

ಕೊರೋನದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ, ಮುಂಬರುವ ಬೇಸಿಗೆಯಲ್ಲಿ ಸೃಷ್ಟಿಯಾಗಲಿರುವ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅತಿವೃಷ್ಟಿ ಪರಿಹಾರ ವಿಳಂಬ ಸೇರಿದಂತೆ ಇನ್ನಿತರ ಪ್ರಮುಖ ವಿಚಾರಗಳು ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.

ನಿರೀಕ್ಷೆ ಹುಸಿ: ವಾರ್ಷಿಕ ಕನಿಷ್ಠ 60 ದಿನಗಳ ಕಾಲ ಅಧಿವೇಶನವನ್ನು ನಡೆಸಬೇಕು ಎಂದು ನಿಯಮ ಮಾಡಲಾಗಿದೆ. ಆದರೆ, 2015ರಲ್ಲಿ 58 ದಿನಗಳ ಕಾಲ ಅಧಿವೇಶನ ಕಲಾಪ ನಡೆಸಿದ್ದನ್ನು ಹೊರತುಪಡಿಸಿದರೆ ಈವರೆಗೂ ಕನಿಷ್ಠ 60 ದಿನಗಳು ಅಧಿವೇಶನ ನಡೆಸಲು ಸಾಧ್ಯವಾಗಿಲ್ಲ. 2020ರಲ್ಲಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕೇವಲ 31 ದಿನಗಳ ಕಾಲವಷ್ಟೇ ಅಧಿವೇಶನ ನಡೆಸಲಾಗಿದೆ.
ಕನಿಷ್ಠ 60 ದಿನ ಕಲಾಪ ನಡೆಸಬೇಕು. ಗರಿಷ್ಠ ನೂರು ದಿನಗಳಷ್ಟು ಕಾಲ ಅಧಿವೇಶನ ಕಲಾಪ ನಡೆಸಿದರೆ ರಾಜ್ಯದ ಜನರ ಸಮಸ್ಯೆಗಳನ್ನು ಜನಪ್ರತಿನಿಧಿಗಳು(ಶಾಸಕರು) ಚರ್ಚಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಸಲಹೆ-ಸೂಚನೆಗಳನ್ನು ನೀಡಲು ಸಾಧ್ಯ ಎಂಬುದು ಆಶಯಕ್ಕೆ ಸೀಮಿತವಾಗಿದೆ.

‘ಶಿವಮೊಗ್ಗ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿನ ಸ್ಫೋಟ ನಡೆದ ಸ್ಥಳ ವೀಕ್ಷಿಸಿದ್ದು, ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಅಲ್ಲಿ ಆರು ಜನ ಮೃತಪಟ್ಟಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ’
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ
‘ವಿಧಾನ ಮಂಡಲ ಜಂಟಿ ಅಧಿವೇಶನದ ಹಿನ್ನೆಲೆಯಲ್ಲಿ ಜ.28ರಿಂದ ಫೆ.5ರವರೆಗೆ ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ವಿಧಾನಸೌಧ ಕಟ್ಟಡದ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರತಿಭಟನೆ, ಧರಣಿ ಸತ್ಯಾಗ್ರಹ, ಮೆರವಣಿಗೆ, ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಮಾರಕಾಸ್ತ್ರ ಸಾಗಣೆ ಸಂಪೂರ್ಣ ನಿಷೇಧಿಸಲಾಗಿದೆ'
-ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News