ಜೆಡಿಎಸ್‍ನ ಜಾತ್ಯತೀತ ಬಣ್ಣ ಬಯಲಾಗಿದೆ: ಸಿದ್ದರಾಮಯ್ಯ

Update: 2021-01-27 12:39 GMT

ಬೆಂಗಳೂರು, ಜ.27: ವಿಧಾನಪರಿಷತ್ ಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಜೆಡಿಎಸ್ ಕೈ ಜೋಡಿಸುವ ಮೂಲಕ ಅದರ ಜಾತ್ಯತೀತ ಬಣ್ಣ ಬಯಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನವರ ಜಾತ್ಯತೀತ ತತ್ವ ಬದಲಾಗಿದೆ. ಅವರ ಸೆಕ್ಯುಲರ್ ಬಣ್ಣ ಕೇಸರಿಯೊಂದಿಗೆ ವಿಲೀನಗೊಂಡಿರುವುದು ಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಿರುವುದರ ಮೂಲಕ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಶಿವಮೊಗ್ಗದಲ್ಲಿ ಸ್ಫೋಟ ಸಂಭವಿಸಿ ಆರು ಜನ  ಮೃತಪಟ್ಟಿದ್ದಾರೆ. ಬಿಜೆಪಿ ಅವಧಿಯಲ್ಲಿ ಈ ರೀತಿಯ ಸಾವು ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಹಾಗೂ ಈ ಪ್ರಕರಣಗಳ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

"ಬಿ.ಸಿ.ಪಾಟೀಲ್ ಬೇಜವಾಬ್ದಾರಿ ಮಾತು"

ಹೊಸದಿಲ್ಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರನ್ನು ಭಯೋತ್ಪಾದಕರೆಂದು ಕರೆದಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ರೈತರು ಮಳೆ ಚಳಿಯೆನ್ನದೆ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಕೇವಲ ಕಣ್ಣೊರೆಸುವ ರೀತಿಯಲ್ಲಿ ರೈತರೊಂದಿಗೆ 11 ಸಭೆಗಳನ್ನು ಕರೆದು ತನ್ನ ಮೊಂಡುತನವನ್ನು ಮುಂದುವರೆಸಿದೆ. ಹೀಗಾಗಿ ತಮ್ಮ ಹಕ್ಕುಗಳಿಗಾಗಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿರುವ ರೈತರನ್ನು ಭಯೋತ್ಪಾದಕರೆಂದು ಕರೆಯುವುದು ಸರಿಯಲ್ಲ. ಬಿಜೆಪಿಯವರು ಅದಾನಿ, ಅಂಬಾನಿಗೆ ಗುಲಾಮರಾಗಿದ್ದಾರೆ. ಹೀಗಾಗಿ ಬಂಡವಾಳಶಾಹಿಗಳ ಪರವಾಗಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ. ರೈತರ ಹೋರಾಟವನ್ನು ದಿಕ್ಕುತಪ್ಪಿಸಲು ಕೆಲವು ಕಿಡಿಗೇಡಿಗಳು ಹಿಂಸಾಚಾರ ನಡೆಸಿದ್ದಾರೆ. ಅವರನ್ನು ಪತ್ತೆ ಮಾಡುವಲ್ಲಿ, ತಡೆಯುವಲ್ಲಿ ಗುಪ್ತಚಾರ ಇಲಾಖೆ ವಿಫಲವಾಗಿದೆ.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News