ಮಧ್ಯವರ್ತಿಗಳ ಹಾವಳಿ ಇಲ್ಲದೆ ಸರಕಾರದ ಯೋಜನೆಗಳು ಜನರಿಗೆ ತಲುಪಬೇಕು: ಸಿಎಂ ಯಡಿಯೂರಪ್ಪ

Update: 2021-01-27 12:58 GMT

ಬೆಂಗಳೂರು, ಜ. 27: ‘ಸರಕಾರದ ಎಲ್ಲ ಯೋಜನೆಗಳು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದ ಜನ ಸಾಮಾನ್ಯರಿಗೆ ತಲುಪಬೇಕು. ಪ್ರಧಾನಿ ಮೋದಿಯವರ ಆಶಯವೂ ಇದೇ ಆಗಿದೆ. ಹೀಗಾಗಿ ಸಂಕಷ್ಟ ಅನುಭವಿಸುತ್ತಿದ್ದ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರ ಮಹತ್ವದ ಯೋಜನೆ ಜಾರಿಗೆ ತಂದಿದೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಂದಾಯ ಇಲಾಖೆಯಿಂದ ಏರ್ಪಡಿಸಿದ್ದ ಫಲಾನುಭವಿಗಳ ಮನೆ ಬಾಗಿಲಿಗೆ ಮಾಸಾಶನ(ಪಿಂಚಣಿ) ಸೌಲಭ್ಯ ಕಲ್ಪಿಸುವ ‘ನವೋದಯ' ಆ್ಯಪ್ ಮತ್ತು ತಂತ್ರಾಂಶ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮನೆ ಬಾಗಿಲಿಗೇ ಮಾಸಾಶನ ಅಭಿಯಾನದ ಮೂಲಕ ಫಲಾನುಭವಿಗಳ ಮನೆಗೆ ಪಿಂಚಣಿ ತಲುಪಿಸಲು ರಾಜ್ಯ ಸರಕಾರ ಹೆಜ್ಜೆಯನ್ನಿಟ್ಟಿದೆ ಎಂದರು.

ದೇಶದಲ್ಲೇ ಇದೇ ಮೊದಲ ಬಾರಿಗೆ ನಾಗರಿಕರ ಆದಾರ ಮತ್ತು ವಯೋಮಿತಿಯನ್ನು ಆಧರಿಸಿ ರಾಜ್ಯ ಸರಕಾರವೇ ಅರ್ಹ ಫಲಾನುಭವಿಗಳನ್ನು ಗುರುತಿಸಲಿದೆ. ಅಲ್ಲದೆ, ಪಿಂಚಣಿಗಾಗಿ ಜನರು ದಾಖಲೆಗಳನ್ನು ಹಿಡಿದು ಸರಕಾರಿ ಕಚೇರಿಗೆ ಹೋಗುವುದನ್ನು ತಪ್ಪಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಹಿರಿಯ ನಾಗರಿಕರು ಇನ್ನು ಮುಂದೆ ಮಧ್ಯವರ್ತಿಗಳು ಇಲ್ಲದೇ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ತಲುಪಲಿದೆ. ಮೊದಲ ಹಂತದಲ್ಲಿ ವೃದ್ಧಾಪ್ಯ ವರ್ಗಕ್ಕೆ ಯೋಜನೆ ಜಾರಿ ಮಾಡಲಾಗಿದೆ. ಎರಡನೆ ಹಂತದಲ್ಲಿ ವಿಧವೆಯರು, ಅಂಗವಿಕಲರು ಸೇರಿದಂತೆ ಉಳಿದ ಎಲ್ಲ ಪಿಂಚಣಿದಾರರಿಗೆ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ನವೋದಯ ಆ್ಯಪ್ ಮತ್ತು ತಂತ್ರಾಂಶದಿಂದ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಸರಳವಾಗಿ ಪಿಂಚಣಿ ದೊರೆಯಲಿದೆ. ಇಷ್ಟು ವರ್ಷದಲ್ಲಿ ಈ ಯೋಜನೆ ಯಾಕೆ ಜಾರಿಗೆ ತಂದಿಲ್ಲ ಎಂದು ಆಶ್ಚರ್ಯವಾಗಿದೆ ಎಂದರು.

ಈ ಹಿಂದೆ ಆಡಳಿತ ನಡೆಸಿದ ಸರಕಾರ ಈ ಯೋಜನೆಯನ್ನು ಜಾರಿಗೆ ತರಬೇಕಿತ್ತು. ಆದರೆ, ಅವರು ಅದರ ಕಡೆ ಗಮನಹರಿಸಿಲ್ಲ. ಈಗ ನಾವು ಜಾರಿಗೆ ತಂದಿದ್ದೇವೆ. ಈ ಯೋಜನೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಇನ್ನು ಮುಂದೆ ಅರ್ಹತೆ ಇಲ್ಲದವರಿಗೆ ಪಿಂಚಣಿ ಸೌಲಭ್ಯ ದೊರೆಯುವುದಿಲ್ಲ ಎಂದು ಅಶೋಕ್ ತಿಳಿಸಿದರು.

ಆಧಾರ್ ಸಂಖ್ಯೆ ಜೋಡಣೆ ಮಾಡುವುದರಿಂದ ಸರಳ ರೀತಿಯಲ್ಲಿ ಪಿಂಚಣಿ ವಿತರಣೆ ಸಾಧ್ಯವಾಗಲಿದೆ. ಅಲ್ಲದೆ, ಅಂಚೆ ಕಚೇರಿ ಮೂಲಕ ಪಿಂಚಣಿ ವಿತರಣೆ ಇರುವುದಿಲ್ಲ. ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಜಮೆ ಆಗಲಿದೆ’ ಎಂದ ಅವರು, ಉಡುಪಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಜಾರಿ ಮಾಡಿದ್ದೇವೆ. ಅದು ಯಶಸ್ವಿಯಾದ ಬಳಿಕ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.

ನೂತನ ತಂತ್ರಜ್ಞಾನದ ಮೂಲಕ ಪಿಂಚಣಿ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇಷ್ಟು ದಿನ ಒಬ್ಬ ವ್ಯಕ್ತಿ 40ರಿಂದ 50 ಮಂದಿ ಪಿಂಚಣಿದಾರರ ಕಾರ್ಡ್ ಪಡೆದು ವಂಚನೆ ಮಾಡುತ್ತಿದ್ದ. ಇನ್ನುಮುಂದೆ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಒಬ್ಬರಿಗೆ ಒಂದೇ ಪಿಂಚಣಿ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಶೋಕ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News