ರೈತರ ಹೆಸರಿಗೆ ಮಸಿ ಬಳಿಯಲು ಆರೆಸೆಸ್ಸ್ ಹುನ್ನಾರ: ಉಗ್ರಪ್ಪ ಆರೋಪ

Update: 2021-01-27 13:13 GMT

ಬೆಂಗಳೂರು, ಜ. 27: ದಿಲ್ಲಿಯ ಕೆಂಪುಕೋಟೆ ಮೇಲೆ ಬೇರೆ ಧ್ವಜ ಹಾರಿಸಿದವರು ಆರೆಸೆಸ್ಸ್, ಬಿಜೆಪಿ ಮೂಲದವರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ರೈತರ ಹೆಸರಿಗೆ ಮಸಿ ಬಳಿಯಲು ಈ ಕೃತ್ಯ ನಡೆಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಇಂದಿಲ್ಲಿ ದೂರಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದೀರ್ಘ ಎರಡು ತಿಂಗಳ ಕಾಲ ಹೋರಾಟ ನಡೆಸಿದರೂ ಕೇಂದ್ರ ಸರಕಾರ ತನ್ನ ಸರ್ವಾಧಿಕಾರಿ ಧೋರಣೆಯನ್ನು ಕೈಬಿಟ್ಟು ರೈತ ವಿರೋಧಿ ಕಾಯ್ದೆಗಳ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕೇವಲ ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸಲು ಸರಕಾರ ಮುಂದಾಗಿದ್ದು, ಅಂಬಾನಿ, ಅದಾನಿ ಅಣತಿಯಂತೆ ಕೇಂದ್ರ ಸರಕಾರ ವರ್ತಿಸುತ್ತಿದೆ ಎಂದು ಆರೋಪಿಸಿದ ಉಗ್ರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರನ್ನು ಭಯೋತ್ಪಾದಕರು ಎಂದು ಹೇಳಿ ಅವಮಾನಿಸಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ವಾಗ್ದಾಳಿ ನಡೆಸಿದರು.

ನಿನ್ನೆ ರೈತರು ಟ್ರ್ಯಾಕ್ಟರ್ ಚಳುವಳಿ ನಡೆಸಿದ್ದು, ಪ್ರತಿಭಟನೆ ಅವರ ಹಕ್ಕು ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ. ಈ ಹಿಂದೆ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ನಡೆದಿತ್ತು. ನಿನ್ನೆ ಅದಾನಿ, ಅಂಬಾನಿ ಕಂಪೆನಿ ವಿರುದ್ಧ ನಡೆದಿದೆ. ದೇಶದಲ್ಲಿ ಎರಡನೆ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗಿದೆ ಎಂದ ಉಗ್ರಪ್ಪ, ದಿಲ್ಲಿ ಪೊಲೀಸ್ ವ್ಯವಸ್ಥೆ ಕೇಂದ್ರದ ನಿಯಂತ್ರಣದಲ್ಲಿದ್ದು, ನಿನ್ನೆ ನಿಯಂತ್ರಣಕ್ಕೆ ಏಕೆ ಕ್ರಮ ವಹಿಸಲಿಲ್ಲ ಎಂದು ಪ್ರಶ್ನಿಸಿದರು.

ಕ್ಷಮೆಯಾಚಿಸಿ: ದಿಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ಭಯೋತ್ಪಾದಕರು ಎನ್ನುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಅಂತಹವರ ವಿರುದ್ಧ ಏಕೆ ದೂರು ದಾಖಲಿಸಲಿಲ್ಲ. ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿರುವ ಪಾಟೀಲ್ ಅವರಿಗೆ ಇದು ಅರ್ಥ ಆಗುವುದಿಲ್ಲವೇ? ಮನಸೋ ಇಚ್ಛೆ ಮಾತನಾಡುವುದನ್ನು ಬಿಟ್ಟು ಮೊದಲು ರೈತರ ಕ್ಷಮೆಯಾಚಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ತನಿಖೆಗೆ ಒತ್ತಾಯ: ಶಿವಮೊಗ್ಗ ಕಲ್ಲು ಕ್ವಾರಿ ಸ್ಫೋಟದ ಬೆನ್ನಲ್ಲೆ ಅಕ್ರಮ ಕ್ವಾರಿ ಚಟುವಟಿಕೆ ಸಕ್ರಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಪ್ರಯತ್ನ ನಡೆಸಿದ್ದಾರೆ. ಆರು ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಸ್ಫೋಟಕಗಳನ್ನು ತರಲಾಗಿದ್ದು, ಚೆಕ್‍ಪೋಸ್ಟ್ಗಳನ್ನು ದಾಟಿ ರಾಜ್ಯಕ್ಕೆ ದೊಡ್ಡ ಪ್ರಮಾಣದ ಸ್ಫೋಟಕಗಳು ಬಂದಿದ್ದು, ಗುಪ್ತಚರ ಮತ್ತು ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಶಿವಮೊಗ್ಗದಲ್ಲಿ ಬಹುತೇಕ ಅಕ್ರಮ ಕಲ್ಲು ಕ್ವಾರಿಗಳಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಸರಕಾರ ಸ್ಪಷ್ಟಣೆ ನೀಡಬೇಕು. ಯಾವುದೇ ಕಾರಣಕ್ಕೂ ಅಕ್ರಮ ಕ್ವಾರಿಗಳನ್ನು ಸಕ್ರಮಗೊಳಿಸಬಾರದು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಮೇಲ್ಮನೆ ಸದಸ್ಯ ಪ್ರಕಾಶ್ ರಾಠೋಡ್ ಹಾಜರಿದ್ದರು.

ಶಿವಮೊಗ್ಗದಲ್ಲಿ ಅಕ್ರಮ ಗಣಿ ಚಟುವಟಿಕೆಗಳಲ್ಲಿ ಸಿಎಂ ಕುಟುಂಬದವರು ಇದ್ದಾರೆಂದು ಹೇಳಲಾಗುತ್ತಿದೆ. ಮೇಲ್ಮನೆ ಸದಸ್ಯ ಭಾನುಪ್ರಕಾಶ್ ಕುಟುಂಬದ ಹೆಸರು ಕೇಳಿಬಂದಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ.
-ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News