ಹುಣಸೋಡು ಸ್ಪೋಟ ಪ್ರಕರಣ: ಹೈಕೋರ್ಟ್‌ನ ಹಾಲಿ ನ್ಯಾಯಾದೀಶರಿಂದ ತನಿಖೆ ನಡೆಸುವಂತೆ ಸಿದ್ದರಾಮಯ್ಯ ಆಗ್ರಹ

Update: 2021-01-27 17:16 GMT

ಶಿವಮೊಗ್ಗ: ಹುಣಸೋಡು ಸ್ಪೋಟ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಾದೀಶರಿಂದ ತನಿಖೆ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಘಟನೆ ನಡೆದು ಹಲವಾರು ದಿನಗಳು ಕಳೆದಿದೆ. ಸ್ಪೋಟದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅದು ಹೈಕೋರ್ಟ್‌ನ ಹಾಲಿ ನ್ಯಾಯಾದೀಶರಿಂದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ನಿಕ್ಷಪಕ್ಷಪಾತ ತನಿಖೆಯಾಗದಿದ್ದರೆ ಸತ್ಯ ಬಯಲಿಗೆ ಬರುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ, ಅಕ್ರಮ ಕ್ವಾರಿಗಳು ನಿಲ್ಲುವುದಿಲ್ಲ ಎಂದ ಅವರು, ಹುಣಸೋಡು ಸ್ಪೋಟ ಪ್ರಕರಣವನ್ನು ವಿಧಾನಮಂಡಲದ ಅಧಿವೇಶನದಲ್ಲಿ  ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಅವಧಿಯಲ್ಲಿ ಕಲ್ಲು ಕ್ವಾರಿಯಲ್ಲಿ ಅಕ್ರಮಗಳು ನಡೆದಿದ್ದೂ ತನಿಖೆಯಾಗಲಿ. ಏನೇ ಆದರೂ ಪ್ರಕರಣದ ದಿಕ್ಕು ತಪ್ಪಿಸಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಪರಿಹಾರಕ್ಕೆ ಕೊಡಿ:
ಸ್ಪೋಟ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರಕಾರ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ ಹೆಚ್ಚಿನ ಪರಿಹಾರ ನೀಡಬೇಕು. ಅದನ್ನು ಮಾನವೀಯತೆಯಡಿಯಲ್ಲಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ ಅವರು, ಪ್ರಕರಣದ ಆರೋಪಿ ಸುಧಾಕರ್ ವಿರುದ್ದ 302 ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

'ಸಾವಿನ ಹೊಣೆ ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹೊರಬೇಕು'
ಇನ್ನು ಸ್ಪೋಟ ಪ್ರಕರಣದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಸಾವಿನ ಹೊಣೆಯನ್ನು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೊರಬೇಕು ಎಂದು ಒತ್ತಾಯಿಸಿದರು. 76 ಅಧಿಕೃತ ಕ್ವಾರಿಗಳಲ್ಲಿ 23 ಕ್ವಾರಿಗಳಿಗೆ ಬ್ಲಾಸ್ಟಿಂಗ್ ಮಾಡಲು ಅನುಮತಿ ನೀಡಲಾಗಿದೆ. ಉಳಿದ 53 ಕ್ವಾರಿಗಳು ಅನುಮತಿ ಪಡೆದುಕೊಂಡಿಲ್ಲ. ಅವರು ಬ್ಲಾಸ್ಟ್ ಮಾಡದೆ ಕ್ವಾರಿಗಳಿಗೆ ಕಲ್ಲು ಬರಲು ಸಾಧ್ಯವೇ, ಮನುಷ್ಯರು ಅಗೆಯಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಅಕ್ರವಾಗಿ ನಡೆಯುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಾಡಾ ಜಾರಿದ್ದಾರೆ ಎಂದು ಟೀಕಿಸಿದರು.

'ಅಕ್ರಮ ಕ್ವಾರಿಗಳು ಆಡಳಿತ ಪಕ್ಷದ್ದು'
ನನಗೆ ಬಂದಿರುವ ಮಾಹಿತಿ ಪ್ರಕಾರ ಅಕ್ರಮ ಕ್ವಾರಿ ನಡೆಸುವವರು ಆಡಳಿತ ಪಕ್ಷದವರೇ ಎಂದು ತಿಳಿದು ಬಂದಿದೆ. ಸ್ವತಃ ಬಿಜೆಪಿ ನಾಯಕ ಆಯನೂರ ಮಂಜುನಾಥ್‌ರವರೇ ಶಿವಮೊಗ್ಗದಲ್ಲಿ ಅಕ್ರಮವಾಗಿ ಕ್ವಾರಿ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಅಕ್ರಮ ಕ್ವಾರಿಗಳ ಮೇಲೆ ಪ್ರಕರಣ ದಾಖಲಿಸಿರುವುದಾಗಿ ಹೇಳುತ್ತಿದ್ದಾರೆ.ಇದು ಅಕ್ರಮವಾಗಿ ಕ್ವಾರಿಗಳು ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 97 ಕ್ರಷರ್‌ಗಳಿವೆ. ಇದಲ್ಲದೇ ಅಕ್ರಮವಾಗಿ ಆನೇಕ ಕ್ವಾರಿಗಳಿವೆ. 20 ವರ್ಷಗಳಿಂದ ಅಕ್ರಮ ಕ್ವಾರಿಗಳು ನಡೆಯುತ್ತಿವೆ. ಇತಂಹ ಅಕ್ರಮ ಕ್ವಾರಿಗಳ ಮೇಲೆ ಅಧಿಕಾರಿಗಳು ನೆಪಮಾತ್ರಕ್ಕೆ ಪ್ರಕರಣ ದಾಖಲಿಸುತ್ತಾರೆ. ಇವರಿಗೆ ಶಿಕ್ಷೆಯಾಗುವುದಿಲ್ಲ. ಇವತ್ತಿನವರೆಗೂ ಅಕ್ರಮ ಕ್ವಾರಿಗಳಿಗೆ ದಂಡ ವಿಧಿಸಲಾಗಿದಿಯೇ ಹೊರತು ಕೇಸ್ ಹಾಕಿಲ್ಲ ಎಂದ ಅವರು, ಈ ರೀತಿಯ ಅಕ್ರಮ ಕ್ವಾರಿ ನಡೆಸಲು ರಾಜಕೀಯ ನಾಯಕರ ಕೃಪೆ ಇದೆ. ಇದು ಮುಖ್ಯಮಂತ್ರಿ ಯಡಿಯೂರಪ್ಪನವರ ಜಿಲ್ಲೆ. ಇಲ್ಲಿ ಅಕ್ರಮ ಕ್ವಾರಿಗಳು ನಡೆಯುತ್ತಿರುವ ಬಗ್ಗೆ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ಇದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಕಾಂಗ್ರೆಸ್ ವಕ್ತಾರ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಡಾ.ಶ್ರೀನಿವಾಸ್ ಕರಿಯಣ್ಣ ಮತ್ತಿತರರು ಇದ್ದರು.

ಈಶ್ವರಪ್ಪ ಕುರುಬ ಸಮಾಜ ಒಡೆಯುತ್ತಿದ್ದಾರೆ: ಸಿದ್ದರಾಮಯ್ಯ
ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸುವ ಹಕ್ಕೊತ್ತಾಯದ ಸಮಾವೇಶದಲ್ಲಿ ಭಾಗವಹಿಸುತ್ತೀರಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಲು ಈಶ್ವರಪ್ಪ ಈಗ ಹೋರಾಟ ಮಾಡುತ್ತಿರುವುದು ಅವರ ಸರ್ಕಾರದ ವಿರುದ್ದವೇ ಎಂದು ಪ್ರತಿಕ್ರಿಯಿಸಿದರು.

ಕುರುಬ ಸಮಾಜಕ್ಕೆ ಎಸ್‌ಟಿ ಸೇರಿಸುವ  ವಿಚಾರದಲ್ಲಿ ಕೇಂದ್ರ ಮತ್ತು ಬಿಜೆಪಿ ಸರ್ಕಾರವೇ ಇದೆ. ಇದಕ್ಕೆ ಪಾದಯಾತ್ರೆ ಯಾಕೆ ಬೇಕು? ಹೋರಾಟ ಯಾಕೆ?. ಈಗ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಲ್ಲಿದೆ ಎಂದು ಈಶ್ವರಪ್ಪನವರನ್ನು ಕುಟುಕಿದರು. ಈಶ್ವರಪ್ಪ ಕುರುಬ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ದ ಕುರುಬ ಸಮಾಜವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News