ಜನರ ದಿಕ್ಕು ತಪ್ಪಿಸಲು ಉದ್ಧವ್ ಠಾಕ್ರೆ ಹುನ್ನಾರ: ಸಚಿವ ರಮೇಶ್ ಜಾರಕಿಹೊಳಿ

Update: 2021-01-27 14:21 GMT

ಬೆಂಗಳೂರು, ಜ. 27: ಗಡಿ ವಿವಾದ ಇದೀಗ ಮುಗಿದ ಅಧ್ಯಾಯ. ಆದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ವಿಚಾರವನ್ನು ಮುಂದಿಟ್ಟುಕೊಂಡು ಜನರನ್ನು ದಿಕ್ಕು ತಪ್ಪಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವಸೇನಾ ಕಾರ್ಯಸೂಚಿಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಜನರನ್ನು ಪ್ರಚೋದಿಸುವುದು ಅವರಿಗೆ ಮುಖ್ಯವಾಗಿದೆ. ಆ ಮೂಲಕ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಕನ್ನಡ-ಮರಾಠಿಗರ ನಡುವಿನ ಸೌಹಾರ್ದತೆ ಕದಡಲು ಯತ್ನಿಸುತ್ತಿದ್ದಾರೆಂದು ತಿರುಗೇಟು ನೀಡಿದರು.

ಈಗಾಗಲೇ ಮಹಾಜನ ವರದಿಯನ್ನು ಒಪ್ಪಲಾಗಿದೆ. ಅದೇ ಅಂತಿಮ. ರಾಜ್ಯದ ನೆಲ, ಜಲ, ಗಡಿ ವಿಚಾರದಲ್ಲಿ ನಮ್ಮೆಲ್ಲ ನಾಯಕರೂ ಒಂದೇ ಆಗಿದ್ದೇವೆ. ನಾಡು–ನುಡಿ ಕಾಯಲು ಬದ್ಧ. ರಾಜ್ಯದಲ್ಲಿ ಗಡಿ ಉಸ್ತುವಾರಿ ಸಚಿವರನ್ನು ನೇಮಿಸುವ ಅಗತ್ಯವಿಲ್ಲ. ಗಡಿ ಸಂರಕ್ಷಣೆಗೆ ಇಡೀ ಸಚಿವಸಂಪುಟ ಬದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಕರ್ನಾಟಕ ರಾಜ್ಯದಲ್ಲಿ ಎಲ್ಲ ಭಾಷಿಕರು ಸೌಹಾರ್ದತೆಯಿಂದ ಬದುಕುತ್ತಿದ್ದು, ನಮ್ಮಲ್ಲಿ ಯಾವುದೇ ಭೇದ-ಭಾವ, ತಾರತಮ್ಯ ಇಲ್ಲ. ಉದ್ಧವ ಠಾಕ್ರೆ ಎಲ್ಲ ರಂಗದಲ್ಲಿ ವಿಫಲರಾಗಿದ್ದಾರೆ. ಗಡಿ ವಿಚಾರವನ್ನು ಕೆದಕಿ ಜನರ ಮನಸ್ಸು ಸೆಳೆಯಲು ಯತ್ನಿಸುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯ ಇಲ್ಲ ಎಂದು ಹೇಳಿದರು.

‘ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯನ್ನು ಬೆಳಗಾವಿಯಲ್ಲಿ ನಿಷೇಧಿಸಬೇಕು. ಎಂಇಎಸ್‍ಗೆ ಅಸ್ತಿತ್ವವೇ ಉಳಿದಿಲ್ಲ. ಆ ಸಂಘಟನೆಯ ಬೆಂಬಲಿತರು ಎಲ್ಲ ಕಡೆಯೂ ಸೋಲುತ್ತಿದ್ದಾರೆ. ಉದ್ಧವ್ ಠಾಕ್ರೆಗೆ ಕೆಲಸ ಇಲ್ಲ. ಹೀಗಾಗಿ ಅವರು ಪದೇ ಪದೇ ಗಡಿ ವಿಚಾರ ಕೆದಕುತ್ತಿದ್ದಾರೆ. ಈ ಕುರಿತು ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ'
-ಶ್ರೀಮಂತ ಪಾಟೀಲ್, ಜವಳಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News