ಐದು ಕಂದಾಯ ವಿಭಾಗಗಳಲ್ಲಿ ಅದಾಲತ್: ಸಚಿವ ಮುರುಗೇಶ್ ನಿರಾಣಿ

Update: 2021-01-27 14:25 GMT

ಬೆಂಗಳೂರು, ಜ. 27: ರಾಜ್ಯದಲ್ಲಿ ಸಣ್ಣ ಪ್ರಮಾಣದ ಗಣಿ ಚಟುವಟಿಕೆಯಲ್ಲಿ ತೊಡಗಿರುವ ಉದ್ಯಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದೇ ಮೊದಲ ಬಾರಿಗೆ ವಿಭಾಗವಾರು ಅದಾಲತ್ ನಡೆಸಲು ತೀರ್ಮಾನಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ವಿಭಾಗಿಯವಾಗಿ ಅದಾಲತ್ ನಡೆಸಲಾಗುವುದು. 15 ದಿನಕ್ಕೊಮ್ಮೆ ಅದಾಲತ್ ನಡೆಸಲು ನಿರ್ಧರಿಸಲಾಗಿದೆ ಎಂದರು.

ಇದರಿಂದ ಸಣ್ಣ ಗಣಿಗಾರಿಕೆ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಲು ಸಾಧ್ಯ. ವಿಧಾನ ಮಂಡಲ ಜಂಟಿ ಅಧಿವೇಶನ ಬಳಿಕ ಮೊದಲ ಅದಾಲತ್ ನಡೆಸಲಾಗುವುದು. ಆದರೆ, ಯಾವ ವಿಭಾಗ ನಡೆಸಬೇಕೆಂಬುದರ ಬಗ್ಗೆ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ನಿರಾಣಿ ಹೇಳಿದರು.

ರಾಜ್ಯದಲ್ಲಿ ಕೆಲ ಉದ್ಯಮಿಗಳು ಕಾನೂನಾತ್ಮಕವಾಗಿ ಗಣಿಗಾರಿಕೆ ನಡೆಸುತ್ತಿದ್ದರೂ ಸಣ್ಣಪುಟ್ಟ ಉಲ್ಲಂಘನೆಯಾಗಿರುತ್ತವೆ. ಅಂತಹವುಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಅದಾಲತ್ ಮೂಲಕ ಶೇ.75ರಷ್ಟು ಸಮಸ್ಯೆಯನ್ನು ಸ್ಥಳೀಯವಾಗಿಯೇ ಬಗೆಹರಿಸಬಹುದು. ಸಣ್ಣಪುಟ್ಟ ನಿಯಮಗಳನ್ನು ಉಲ್ಲಂಘನೆ ಮಾಡಿದವರಿಗೆ ದಂಡಗಳನ್ನು ವಿಧಿಸಿ ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ರೀತಿ ದಂಡ ವಸೂಲಿ ಮೂಲಕ 70ಕೋಟಿ ರೂ.ಗಳಷ್ಟು ದಂಡ ಸಂಗ್ರಹಿಸಲಾಗಿದೆ. 2020-21ನೆ ಸಾಲಿನಲ್ಲಿ ಆದಾಯ ಸಂಗ್ರಹಕ್ಕೆ ನೀಡಿರುವ ಗುರಿಯಲ್ಲಿ ಶೇ.10ರಷ್ಟು ಮಾತ್ರ ಬಾಕಿ ಇದೆ. ಕೊರೋನದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹವಾಗಿಲ್ಲ. ಈವರೆಗೆ 3,750 ಕೋಟಿ ರೂ.ಸಂಗ್ರಹವಾಗಿದೆ ಎಂದು ಸಚಿವ ನಿರಾಣಿ ಮಾಹಿತಿ ನೀಡಿದರು.

ತರಬೇತಿ ಕೇಂದ್ರ ಸ್ಥಾಪನೆ: ಗಣಿಗಾರಿಕೆ ಹಾಗೂ ಅದರ ಚಟುವಟಿಕೆಗಳ ಬಗ್ಗೆ ಉದ್ದಿಮೆದಾರರಿಗೆ ತರಬೇತಿ ನೀಡುವ ಉದ್ದೇಶದಿಂದ ರಾಜ್ಯದಲ್ಲೂ ಇಂಡಿಯನ್ ಇನ್ಸ್‍ಟಿಟ್ಯೂಟ್ ಮೈನ್ ಲರ್ನಿಂಗ್ ಸೆಂಟರ್ (ತರಬೇತಿ ಕೇಂದ್ರ) ಪ್ರಾರಂಭ ಮಾಡಲಾಗುವುದು' ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

‘ಶಿವಮೊಗ್ಗ ಸ್ಫೋಟ ಪ್ರಕರಣ ಸಂಬಂಧ ಸ್ಫೋಟಕ ಸರಬರಾಜು ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರ ವಿರುದ್ಧ ಈಗಾಗಲೇ ಎಫ್‍ಐಆರ್ ದಾಖಲಾಗಿದೆ. ಶಿವಮೊಗ್ಗದಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು. ತನಿಖೆ ಪ್ರಗತಿಯಲ್ಲಿದ್ದು, ಯಾರೇ ಇದ್ದರು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಾರದಲ್ಲಿ ತನಿಖೆ ವರದಿ ನೀಡುವಂತೆ ಸೂಚಿಸಲಾಗಿದೆ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ನನ್ನ ವಿರುದ್ಧ ದೂರು ಕೊಟ್ಟವರ ಹಿನ್ನೆಲೆ ಏನೆಂಬುದು ಗೊತ್ತಿದೆ. ಅವನೊಬ್ಬ ವಂಚಕ. ಆನೆ ಹೋಗುವಾಗ ಶ್ವಾನ ಬೊಗಳುತ್ತದೆ. ನಾನು ನ್ಯಾಯಯುತವಾಗಿದ್ದೇನೆ. ನನಗೂ ಸರಕಾರಕ್ಕೂ ಯಾವುದೇ ಹಿನ್ನಡೆಯಾಗಿಲ್ಲ'
-ಮುರುಗೇಶ್ ಆರ್.ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News