ಮೂಲಸೌಕರ್ಯ, ಪರಿಹಾರದ ಪ್ಯಾಕೆಜ್‍ಗೆ ಆಗ್ರಹಿಸಿ ಗುಪ್ತಶೆಟ್ಟಿಹಳ್ಳಿ ನಿವಾಸಿಗಳಿಂದ ಧರಣಿ

Update: 2021-01-27 15:15 GMT

ಚಿಕ್ಕಮಗಳೂರು, ಜ.27: ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯಲ್ಲಿರುವ ಗುಪ್ತಶೆಟ್ಟಿಹಳ್ಳಿ ಗ್ರಾಮಕ್ಕೆ ಕಳೆದ ಹದಿನೈದು ವರ್ಷಗಳಿಂದ ಮೂಲಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಅಲ್ಲದೇ ಅರಣ್ಯ ಇಲಾಖೆ ಸಾರಗೋಡು ಗ್ರಾಮದಿಂದ ಒಕ್ಕಲೆಬ್ಬಿಸಿದ ಕುಟುಂಬಗಳಿಗೆ ಸರಕಾರ ನಿಗದಿ ಮಾಡಿರುವ ಪರಿಹಾರ ಪ್ಯಾಕೆಜ್ ಅನ್ನೂ ಇನ್ನೂ ನೀಡಿಲ್ಲ ಎಂದು ಆರೋಪಿಸಿ ನಿವಾಸಿಗಳು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದಿವಂಗತ ಎಸ್ಪಿ ಮಧುಕರ ಶೆಟ್ಟಿ ಅವರ ಭಾವಚಿತ್ರ ಮುಂದಿಟ್ಟುಕೊಂಡು ಬುಧವಾರ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯಲ್ಲಿರುವ ಗುಪ್ತಶೆಟ್ಟಿ ಗ್ರಾಮದ 32 ಕಟುಂಬಗಳು ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಮಾಡಿಕೊಂಡಿದ್ದು, ಸಾಗುವಳಿ ಜಾಗ ಅರಣ್ಯಕ್ಕೆ ಸೇರಿದ್ದೆಂದು 32 ಕುಟುಂಬಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಈ ಹಿಂದೆ ಒಕ್ಕಲೆಬ್ಬಿಸಿದ್ದರು.

ಈ ಸಂದರ್ಭದಲ್ಲಿ ಸಂತ್ರಸ್ಥರು ಚಳವಳಿ ಆರಂಭಿಸಿದ್ದರಿಂದ ಆಗ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದ ಮಧುಕರಶೆಟ್ಟಿ ಹಾಗೂ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರು, ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯಲ್ಲಿರುವ ಸ.ನಂ.190ರಲ್ಲಿ ಪ್ರಾಭಾವಿ ಭೂಮಾಲಕರೊಬ್ಬರು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿದ್ದ ಕಂದಾಯ ಜಾಗವನ್ನು ಖುಲ್ಲ ಮಾಡಿಸಿದ್ದರು. ಹೀಗೆ ಖುಲ್ಲಾ ಮಾಡಿಸಿದ ಜಮೀನನ್ನು ಸಾರಗೋಡು ಗ್ರಾಮದಲ್ಲಿ ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದ್ದ 32 ಕುಟುಂಬಗಳಿಗೆ ತಲಾ 2 ಎರಡು ಎಕರೆ ಜಮೀನಿನಂತೆ ಹಂಚಿಕೆ ಮಾಡಿದ್ದಲ್ಲದೇ ಜಮೀನು ಹಕ್ಕುಪತ್ರಗಳನ್ನು ನೀಡಿದ್ದರು.

ಎಸ್ಪಿ ಮಧುಕರಶೆಟ್ಟಿ ಹಾಗೂ ಡಿಸಿ ಹರ್ಷಗುಪ್ಪ ಅವರ ಪರಿಶ್ರಮದಿಂದ ಬೀದಿಪಾಲಾಗಬೇಕಿದ್ದವರಿಗೆ ತಮಗೆ ಜಮೀನು ನೀಡಿ ನೆಲೆ ಕಲ್ಪಿಸಿದ್ದರಿಂದ 32 ಕುಟುಂಬಗಳು ತಾವು ನೆಲೆಸಿದ್ದ ಜಾಗಕ್ಕೆ ಈ ಅಧಿಕಾರಿಗಳಿಬ್ಬರ ಸ್ಮರಣಾರ್ಥ ಗುಪ್ತಶೆಟ್ಟಿ ಎಂದು ನಾಮಕರಣ ಮಾಡಿ ಅಲ್ಲೇ ನೆಲೆಸಿದ್ದರು.
ಆದರೆ ಸಾರಗೋಡು ಗ್ರಾಮದಿಂದ ಈ 32 ಕುಟುಂಬಗಳು ಗುಪ್ತಶೆಟ್ಟಿಹಳ್ಳಿಗೆ ಬಂದು 15 ವರ್ಷ ಕಳೆದರೂ ಸೂಕ್ತ ರಸ್ತೆ, ವಿದ್ಯುತ್‍ನಂತಹ ಸೌಲಭ್ಯಗಳನ್ನು ಒದಗಿಸಿಲ್ಲ. ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸಿದ ಸಂದರ್ಭ 32 ಕುಟುಂಬಗಳಿಗೆ ತಲಾ 1,55,000 ರೂ. ಪರಿಹಾರವನ್ನು ಅರಣ್ಯ ಇಲಾಖೆ ನಿಗದಿ ಮಾಡಿದ್ದು, ಇದರೊಂದಿಗೆ ಸಾಗಣೆ ವೆಚ್ಚ, ಮನೆ ನಿರ್ಮಾಣ ವೆಚ್ಚ ಹಾಗೂ ಪ್ರಾಪ್ತ ವಯಸ್ಕ ಮಕ್ಕಳಿಗೆ 50 ಸಾವಿರ ರೂ. ನೀಡಬೇಕಿತ್ತು. ಆದರೆ ಕಳೆದ 15 ವರ್ಷಗಳಿಂದ 32 ಸಂತ್ರಸ್ಥರ ಪೈಕಿ ಕೆಲವೇ ಮಂದಿಗೆ ಪರಿಹಾರದ ಪ್ಯಾಕೆಜ್ ನೀಡಿರುವುದನ್ನು ಬಿಟ್ಟರೇ ಉಳಿದವರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಸಂತ್ರಸ್ಥರಿಗೆ ಮನೆ ನಿರ್ಮಾಣದ ವೆಚ್ಚ ಸಿಗದೇ ಗುಡಿಸಲುಗಳಲ್ಲೇ ವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗುಪ್ತಶೆಟ್ಟಿಹಳ್ಳಿಯ ಸಂತ್ರಸ್ಥರು ಸದ್ಯ ಆರೋಪಿಸುತ್ತಿದ್ದಾರೆ.

ಮೂಲಸೌಕರ್ಯ ಹಾಗೂ ಪರಿಹಾರದ ಪ್ಯಾಕೆಜ್‍ಗೆ ಆಗ್ರಹಿಸಿ ಬುಧವಾರ ಬೆಳಗ್ಗೆ ತಮ್ಮ ಗ್ರಾಮದಲ್ಲಿ ಧರಣಿ ಆರಂಭಿಸಿರುವ ನಿವಾಸಿಗಳು, ತಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ಧರಣಿಯನ್ನು ಕೈಬಿಡುವುದಿಲ್ಲ. ಎಲ್ಲ ಕುಟುಂಬಗಳು ಪ್ರತಿದಿನ ಸರಣಿಯಂತೆ ಧರಣಿಯನ್ನು ಮುಂದುವರಿಸುತ್ತೇವೆ. ಮೂಲಸೌಕರ್ಯ ಹಾಗೂ ಪರಿಹಾರಕ್ಕಾಗಿ ಜಿಲ್ಲಾಡಳಿತ, ಅರಣ್ಯ ಇಲಾಖೆಗೆ ಮನವಿಯನ್ನು ಕೊಟ್ಟು ಬೇಸತ್ತಿದ್ದು, ಇನ್ನು ಮುಂದೆ ಸರಕಾರಿ ಕಚೇರಿಗಳಿಗೆ ಅಲೆಯುವುದಿಲ್ಲ. ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಆಲಿಸಲು ಗ್ರಾಮಕ್ಕೇ ಬರಬೇಕು. ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಕಣ್ಣಾರೆ ಕಾಣಬೇಕೆಂದು ಧರಣಿನಿರತರು ಆಗ್ರಹಿಸಿದ್ದಾರೆ.

ಭೈರಿಗದ್ದೆ ರಮೇಶ್ ನೇತೃತ್ವದಲ್ಲಿ ನಿವಾಸಿಗಳು ಧರಣಿ ಹಮ್ಮಿಕೊಂಡಿದ್ದು, ಧರಣಿಗೆ ಬೆಂಬಲ ನೀಡಿರುವ ಪ್ರಗತಿಪರ ರೈತಸಂಘ, ಕರ್ನಾಟಕ ಪ್ರಗತಿಪರ ಸಂಘ, ಪ್ರಗತಿಪರ ಕಾರ್ಮಿಕರ ಸಂಘದ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಗುಪ್ತಶೆಟ್ಟಿಹಳ್ಳಿ ನಿವಾಸಿಗಳ ಬೇಡಿಕೆಗಳು:
ಗುಪ್ತಶೆಟ್ಟಿಹಳ್ಳಿಯಲ್ಲಿ ಸಂತ್ರಸ್ಥರು ವಾಸವಿರುವ ನಿವೇಶನಗಳಿಗೆ ಹಕ್ಕುಪತ್ರ ನೀಡಬೇಕು, ಸಂತ್ರಸ್ಥರಿಗೆ ಮಂಜೂರು ಮಾಡಿರುವ ಜಮೀನುಗಳ ಹದ್ದುಬಸ್ತು ಮಾಡಿ, ಪಕ್ಕಾಪೋಡು ಮಾಡಬೇಕು, ನಿಜವಾದ ನಿರಾಶ್ರಿತ ಕುಟುಂಬಗಳಿಗೆ ನಿರಾಶ್ರಿತರಲ್ಲದವರಿಂದ ಯಾವುದೇ ತೊಂದರೆಗಳಾಗದಂತೆ ಕ್ರಮವಹಿಸಬೇಕು, ಗುಪ್ತಶೆಟ್ಟಿಹಳ್ಳಿಯಲ್ಲಿರುವ ನಿರಾಶ್ರಿತರಿಗೆ ಮನೆ, ರಸ್ತೆ, ವಿದ್ಯುತ್, ಅಂಗನವಾಡಿ, ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು, ಸಂತ್ರಸ್ಥರಿಗೆ ಸರಕಾರ ನಿಗದಿ ಮಾಡಿರುವ ಪರಿಹಾರದ ಪ್ಯಾಕೇಜ್‍ಅನ್ನು ಸಂಪೂರ್ಣವಾಗಿ ನೀಡಬೇಕು. ಸಂತ್ರಸ್ಥರು ವಾಸವಿರುವ ಗುಪ್ತಶೆಟ್ಟಿ ಗ್ರಾಮದ ಹೆಸರನ್ನು ಕಂದಾಯ ಗ್ರಾಮವಾಗಿ ದಾಖಲು ಮಾಡಬೇಕೆಂಬ ಬೇಡಿಕೆಗಳನ್ನು ಧರಣಿ ನಿರತರು ಜಿಲ್ಲಾಡಳಿತದ ಮುಂದಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News