ಮೋದಿ ಸರಕಾರ, ಬಿಎಸ್‍ವೈ ಸರಕಾರ ಎಂದು ಉಲ್ಲೇಖಿಸುವ ವಿಚಾರ: ಅರ್ಜಿದಾರರು ಅಹವಾಲು ಸಲ್ಲಿಸಲು ಸ್ವತಂತ್ರರು ಎಂದ ಹೈಕೋರ್ಟ್

Update: 2021-01-27 15:57 GMT

ಬೆಂಗಳೂರು, ಜ.27: ಭಾರತ ಸರಕಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಮತ್ತು ಕರ್ನಾಟಕ ಸರಕಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರ ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ(ಪಿಐಬಿ) ಮತ್ತು ಮಾಧ್ಯಮಗಳು ಉಲ್ಲೇಖಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜತೆಗೆ ಅರ್ಜಿದಾರರು ಭಾರತ ಸರಕಾರವನ್ನು ನರೇಂದ್ರ ಮೋದಿ ಸರಕಾರ, ಕರ್ನಾಟಕ ಸರಕಾರವನ್ನು ಬಿ.ಎಸ್.ಯಡಿಯೂರಪ್ಪ ಸರಕಾರ ಎಂದು ಉಲ್ಲೇಖಿಸುವ ವಿಚಾರವಾಗಿ ತಮ್ಮ ಅಹವಾಲನ್ನು ಸಲ್ಲಿಸಲು ಸ್ವತಂತ್ರರು ಎಂದು ತಿಳಿಸಿದೆ. 

ಮಾಧ್ಯಮ ಹಾಗೂ ಪಿಐಬಿಗಳು ಸರಕಾರವನ್ನು ಅವುಗಳ ನೇತೃತ್ವ ವಹಿಸಿರುವ ವ್ಯಕ್ತಿಗಳ ಹೆಸರಿನ ಮೂಲಕ ಕರೆಯುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ. 

ಸರಕಾರವನ್ನು ಮಾಧ್ಯಮವು ಯಾವ ರೀತಿ ಉಲ್ಲೇಖಿಸಬೇಕು ಎಂದು ಸೂಚನೆ ನೀಡುವುದು ಸಾಧ್ಯವಿಲ್ಲ. ಆದರೆ, ಪಿಐಬಿಗೆ ಸಂಬಂಧಪಟ್ಟಂತೆ ಅರ್ಜಿದಾರರು ಭಾರತ ಸರಕಾರವನ್ನು ನರೇಂದ್ರ ಮೋದಿ ಸರಕಾರ ಎಂದು ಉಲ್ಲೇಖಿಸುವ ವಿಚಾರವಾಗಿ ತಮ್ಮ ಅಹವಾಲನ್ನು ಸಲ್ಲಿಸಲು ಸ್ವತಂತ್ರರು. ಇಂಥ ಮನವಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಾನೂನಿಗೆ ಅನುಗುಣವಾಗಿ ನಿರ್ಧರಿಸುತ್ತಾರೆ ಎಂದು ತಿಳಿಸಿದೆ. 

ಭಾರತದ ಪ್ರಜಾಪ್ರಭುತ್ವದ ನೆಲೆಯಲ್ಲಿ ಯಾವ ಸರಕಾರವನ್ನೂ ಅದರ ಮುಖ್ಯಸ್ಥನ ಹೆಸರಿನಿಂದ ಉಲ್ಲೇಖಿಸುವಂತಿಲ್ಲ. ಸಂವಿಧಾನದ ಅಡಿಯಲ್ಲಿ ಅದಕ್ಕೆ ಅವಕಾಶವಿದೆಯೇ ಎಂದು ಅರ್ಜಿದಾರರು ಪ್ರಶ್ನಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News